ಮಡಿಕೇರಿ ಜೂ.6 NEWS DESK : ವಿದ್ಯಾರ್ಥಿ ಜೀವನದಲ್ಲಿರುವಾಗಲೇ ಪರಿಸರದ ಬಗ್ಗೆ ಹೆಚ್ಚಿನ ಅರಿವು ಮತ್ತು ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂದು ಜಿ.ಪಂ.ಸಿಇಒ ವರ್ಣಿತ್ ನೇಗಿ ತಿಳಿಸಿದರು.
ಕೊಡಗು ಜಿಲ್ಲಾ ಪಂಚಾಯತ್ ಮತ್ತು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗಾಳಿಬೀಡು ಗ್ರಾಮ ಪಂಚಾಯತಿಯ ಚಪ್ಪಂಡ ಕೆರೆ ಅಮೃತ ಸರೋವರ ದಂಡೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಮಕ್ಕಳೆಲ್ಲರೂ ಪರಿಸರ ನಾಯಕರು ಎಂದು ಬಣ್ಣಿಸಿದರು. ಗಿಡ ನೆಡುವುದು ಮಾತ್ರವೇ ಪರಿಸರ ಸಂರಕ್ಷಣೆಯಲ್ಲ. ವಿದ್ಯುತ್‍ನ ಮಿತ ಬಳಕೆ, ಇಂಧನಗಳ ಮಿತ ಬಳಕೆ ಸಹ ಪರಿಸರ ಸಂರಕ್ಷಣೆಯ ಪ್ರಮುಖ ಭಾಗವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಚಪ್ಪಂಡ ಕೆರೆ ಅಮೃತ ಸರೋವರದ ದಂಡೆಯಲ್ಲಿ ಮಾವು, ಹಲಸು ಸೇರಿದಂತೆ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು. ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ನಡೆಯಿತು.
ಗಾಳಿಬೀಡು ಗ್ರಾ.ಪಂ ಅಧ್ಯಕ್ಷರಾದ ಬಿ.ಜಿ.ಉಷಾ, ಜಿ.ಪಂ.ಉಪ ಕಾರ್ಯದರ್ಶಿ ಜಿ.ಧನರಾಜು, ತಾ.ಪಂ. ಇಒ ನಾಗಮಣಿ, ಸಹಾಯಕ ನಿರ್ದೇಶಕರಾದ ಹೇಮಂತ್, ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಮಹೇಂದ್ರ, ತಾಂತ್ರಿಕ ಸಂಯೋಜಕರಾದ ದಿಲೀಪ್, ತಾಲೂಕು ಎಂಐಎಸ್ ಸಂಯೋಜಕಿ ಬಿನ್ಸಿ, ಗ್ರಾ.ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು.