ಮಡಿಕೇರಿ ಜೂ.7 NEWS DESK : ಕಾರು ಮತ್ತು ಆಟೋರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಆಟೋ ರಿಕ್ಷಾದಲ್ಲಿದ್ದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಾಪೋಕ್ಲು-ಕೊಳಕೇರಿ ಮುಖ್ಯ ರಸ್ತೆಯ ಹಳೇ ತಾಲೂಕಿನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ನಾಪೋಕ್ಲು ಕಡೆಯಿಂದ ಹಳೇ ತಾಲೂಕು ಮಾರ್ಗವಾಗಿ ತೆರಳುತ್ತಿದ್ದ ಆಕಾಶ್ ಎಂಬುವರಿಗೆ ಸೇರಿದ ಕಾರು ಹಾಗೂ ಕೊಳಕೇರಿ ಕಡೆಯಿಂದ ನಾಪೋಕ್ಲುವಿಗೆ ಪ್ರಯಾಣಿಕರನ್ನು ಕರೆ ತರುತ್ತಿದ್ದ ಸಮದ್ ಎಂಬುವರ ಆಟೋರಿಕ್ಷಾ ನಡುವೆ ಕೊಳಕೇರಿ ಹಳೇ ತಾಲೂಕು ಮುಖ್ಯ ರಸ್ತೆಯ ನೂರಂಬಡ ಎಂಬಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಆಟೋರಿಕ್ಷಾ ರಸ್ತೆಯಲ್ಲಿ ಪಲ್ಟಿಯಾಗಿದೆ.
ಆಟೋಚಾಲಕ ಹಾಗೂ ಮೂವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.









