
ಮಡಿಕೇರಿ ಜೂ.10 NEWS DESK : ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಮೂವರು ವಿದ್ಯಾರ್ಥಿನಿಯರು ವಿವಿಧ ವಿಭಾಗಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ರ‍್ಯಾಂಕ್ ಗಳಿಸಿದ್ದು, ಓರ್ವ ವಿದ್ಯಾರ್ಥಿನಿ ನಗದು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಕೊಡವ ಎಂ.ಎ ಸ್ನಾತಕೋತ್ತರ ಪದವಿಯಲ್ಲಿ ಲೇಖಕಿ ಹಾಗೂ ಕವಯಿತ್ರಿ ಹೇಮಾವತಿ ಬಿ.ಎನ್ ಅವರು ಪ್ರಥಮ ರ‍್ಯಾಂಕ್ ಪಡೆದು ಕೊಡವ ಭಾಷೆ, ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಹಿರಿಮೆ ತಂದಿದ್ದಾರೆ.
ಪಿಜಿ ಡಿಪ್ಲೊಮಾ ಯೋಗ ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ಶಶಿ ಕಿರಣ ವೈ.ಆರ್ ಅವರು ತಮ್ಮ 63ನೇ ವಯಸ್ಸಿನಲ್ಲಿ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಎಂಎ ಅರ್ಥಶಾಸ್ತ್ರ ವಿಭಾಗದಲ್ಲಿ ವಿದ್ಯಾರ್ಥಿನಿ ಗ್ರೀಷ್ಮ ಕೆ.ಎ ಪ್ರಥಮ ರ್ಯಾಂಕ್ ಪಡೆದುಕೊಂಡಿದ್ದು, ಇವರು ಈ ಹಿಂದೆ ಪಿಯು ಕಲಾ ವಿಭಾಗದಲ್ಲಿ ಕೊಡಗು ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ್ದರು.
::: ನಗದು ಪುರಸ್ಕಾರ :::
ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಹಂತದಲ್ಲಿ ಸೂಕ್ಷ್ಮ ಜೀವವಿಜ್ಞಾನ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿನಿ ಹಿಬಾತುಲ್ ಬಾರಿ ಅವರಿಗೆ ಪ್ರೊ.ಜಿ.ವಿ.ಭಟ್ ಮೆಮೋರಿಯಲ್ ನಗದು ಪುರಸ್ಕಾರ ಲಭಿಸಿದೆ. ಇವರು ಪ್ರಸ್ತುತ ಮಂಗಳೂರಿನ ಪ್ರತಿಷ್ಠಿತ ಕಾಲೇಜ್‍ನಲ್ಲಿ ಮೆಡಿಕಲ್ ಮೈಕ್ರೋ ಬಯೋಲಜಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡುತ್ತಿದ್ದಾರೆ.
ಇದೇ ಜೂ.11ರಂದು ಕಾಲೇಜಿನ ವಾರ್ಷಿಕೋತ್ಸವದಲ್ಲಿ ಈ ಸಾಧಕರನ್ನು ಸನ್ಮಾನಿಸಲಾಗುವುದು. ಜೂ.15ರಂದು ನಡೆಯುವ ಮಂಗಳೂರು ವಿವಿಯ 42ನೇ ಘಟಿಕೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರಿಂದ ಪ್ರಶಸ್ತಿ ಸಹಿತ ರ್ಯಾಂಕ್ ಪ್ರಮಾಣ ಪತ್ರವನ್ನು ಸ್ವೀಕರಿಸಲಿದ್ದಾರೆ ಎಂದು ಕಾಲೇಜ್ ನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








