ಮಡಿಕೇರಿ ಜೂ.11 NEWS DESK : ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ ಸರಕಾರದ ಸಚಿವ ಸಂಪುಟದಲ್ಲಿ ದಲಿತ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನ ನೀಡದೆ ಸಾಮಾಜಿಕ ನ್ಯಾಯವನ್ನು ಕಡೆಗಣಿಸಲಾಗಿದೆ ಎಂದು ಲೋಕಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸಚಿವ ಸಂಪುಟದಲ್ಲಿ 72 ಸಚಿವರ ಪೈಕಿ ಒಂದೇ ಸಮುದಾಯದ 25 ಮಂದಿಗೆ ಸ್ಥಾನ ನೀಡಲಾಗಿದೆ. ಶೇ.2 ರಷ್ಟು ಇರುವ ಬ್ರಾಹ್ಮಣರು ಸಂಪುಟದಲ್ಲಿ ಶೇ.35 ರಷ್ಟು ಸ್ಥಾನ ಪಡೆದುಕೊಂಡಿದ್ದಾರೆ. ಬೇರೆ ಸಮುದಾಯದವರು ಬಿಜೆಪಿಗೆ ಮತದಾನ ಮಾಡಿಲ್ಲವೇ ಎಂದು ಪ್ರಶ್ನಿಸಿದರು.
ಕರ್ನಾಟದಲ್ಲಿ 17 ಬಿಜೆಪಿ ಸಂಸದರಿದ್ದು, ಐವರಿಗೆ ಸಚಿವ ಸ್ಥಾನ ನೀಡಲಾಗಿದೆ. ದಲಿತ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ. ಲಿಂಗಾಯಿತ ಸಮುದಾಯದ ವಿ.ಸೋಮಣ್ಣ ಅವರಿಗೆ ರಾಜ್ಯ ಖಾತೆ ಸ್ಥಾನ ನೀಡಲಾಗಿದೆ. ನಿಜವಾಗಿಯೂ ಬಿಜೆಪಿ ಬಳಿ ಸಾಮಾಜಿಕ ನ್ಯಾಯ ಇದೆಯೇ ಎಂದು ಪ್ರಶ್ನಿಸಿದರು. ಕೇಂದ್ರದಲ್ಲಿ ಸಚಿವರಾಗಿರುವ ಜೆಡಿಎಸ್ ನ ಹೆಚ್.ಡಿ.ಕುಮಾರಸ್ವಾಮಿ ಅವರು ಕೇವಲ ಕಾಂಗ್ರೆಸ್ ಪಕ್ಷ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಟೀಕಿಸುವುದರಲ್ಲೇ ಕಾಲಹರಣ ಮಾಡದೆ ರಾಜ್ಯದ ವಿವಿಧ ಸಮಸ್ಯೆಗಳನ್ನು ಬಗೆ ಹರಿಸಲು ಬದ್ಧರಾಗಿರಬೇಕಾಗುತ್ತದೆ ಎಂದರು. ಕಾವೇರಿ ವಿವಾದ, ಮೇಕೆದಾಟು ಯೋಜನೆ, ಕಳಸಬಂಡೂರಿ ಯೋಜನೆ, ಕಸ್ತೂರಿ ರಂಗನ್ ವಿವಾದ, ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಜಿಎಸ್‌ಟಿ ಮತ್ತು ಬರ ಪರಿಹಾರ ಬಾಕಿ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸ್ಪಂದಿಸಿದರೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಹಳೇ ಮೈಸೂರು ಭಾಗ ಸೇರಿದಂತೆ ರಾಜ್ಯದ ವಿವಿಧೆಡೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಚೆನ್ನಾಗಿ ಕೆಲಸ ಮಾಡಿದೆ. ಇದರ ಪರಿಣಾಮ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನನ್ನ ಸೋಲಾಗಿದೆ. ನಾನು ಕೇವಲ ಸೋತ್ತಿದ್ದೇನೆ ಅಷ್ಟೆ ಸತ್ತಿಲ್ಲ. ನನಗೆ ಮತ ಹಾಕಿದವರ ಮತ್ತು ಹಾಕದವರ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಸಿದ್ಧವಿದ್ದೇವೆ. ನನ್ನ ಮೊಬೈಲ್ 24 ಗಂಟೆಯೂ ಚಾಲ್ತಿಯಲ್ಲಿರುತ್ತದೆ, ಯಾರು, ಯಾವಾಗ ಬೇಕಾದರು ನನಗೆ ಕರೆ ಮಾಡಿ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ. ಕೊಡಗಿನ ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲು ಮಡಿಕೇರಿಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ವಾರಕ್ಕೆ ಒಂದು ಬಾರಿ ಬೆಳಗ್ಗೆಯಿಂದ ಸಂಜೆಯವರೆಗೆ ಲಭ್ಯವಿರುತ್ತೇನೆ ಎಂದು ಲಕ್ಷ್ಮಣ್ ಹೇಳಿದರು.
ಕಳೆದ ಹತ್ತು ವರ್ಷಗಳಲ್ಲಿ ಹಿಂದಿನ ಸಂಸದ ಪ್ರತಾಪ್ ಸಿಂಹ ಅವರು ಕೊಡಗು ಜಿಲ್ಲೆಗೆ ಯಾವುದೇ ಕೊಡುಗೆಯನ್ನು ನೀಡಿಲ್ಲ. ಇದೀಗ ನೂತನವಾಗಿ ಆಯ್ಕೆಯಾಗಿರುವ ಸಂಸದ ಯದುವೀರ್ ಅವರಾದರು ಅಭಿವೃದ್ಧಿ ಕಾರ್ಯಗಳನ್ನು ತರಲಿ ಎಂದರು.
::: ಸೋಲಿಗೆ ದುರಾದೃಷ್ಟ ಕಾರಣ :::
ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅವಕಾಶ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ನನ್ನ ಪರವಾಗಿ ಸಾಕಷ್ಟು ಶ್ರಮಿಸಿದ ಪಕ್ಷದ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ನಾನು ಸೋತು ನಿರಾಶೆ ಉಂಟು ಮಾಡಿದ್ದೇನೆ. ಅವರ ಬಳಿ ಕ್ಷಮೆ ಕೋರುತ್ತೇನೆ, ನನ್ನ ಸೋಲಿಗೆ ನನ್ನ ದುರಾದೃಷ್ಟ ಕಾರಣವೇ ಹೊರತು ಬೇರೆ ಯಾರೂ ಅಲ್ಲ, ನಾನು ನಿರಂತರವಾಗಿ ಸೋಲುತ್ತಾ ಬಂದಿದ್ದೇನೆ. ಸೋಲಿನ ಬಗ್ಗೆ ಪಕ್ಷದ ಸಭೆಯಲ್ಲಿ ಆತ್ಮಾವಲೋಕನ ನಡೆಸುತ್ತೇವೆ ಎಂದು ಲಕ್ಷ್ಮಣ್ ಬೇಸರ ವ್ಯಕ್ತಪಡಿಸಿದರು.
ನಾನು ಎಲ್ಲೂ ಮತದಾರರನ್ನು ಸ್ಯಾಡಿಸ್ಟ್ ಎಂದು ಹೇಳಿಲ್ಲ, ಇಡೀ ವ್ಯವಸ್ಥೆ ಸ್ಯಾಡಿಸ್ಟ್ ಆಗಿದೆ ಎಂದು ಹೇಳಿದ್ದೇನೆ. ಬೇಕಿದ್ದರೆ ವಿಡಿಯೋದ ತುಣುಕುಗಳನ್ನು ನೋಡಬಹುದು. ಕಾಂಗ್ರೆಸ್ ಪಕ್ಷ ರಾಜ್ಯದ 8 ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯಕ್ಕೆ ಸ್ಪರ್ಧಿಸಲು ಅವಕಾಶ ನೀಡಿತ್ತು. ಆದರೆ ಹಾಸನ ಕ್ಷೇತ್ರವನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಇಂದು ಜಾತಿ ಧ್ರುವೀಕರಣವಾಗುತ್ತಿದೆ ಎಂದು ಅವರು ವಿಶ್ಲೇಷಿಸಿದರು.
::: ಭಾಗ್ಯಗಳಲ್ಲಿ ನ್ಯೂನತೆ :::
ಉಚಿತ ವಿದ್ಯುತ್ ಮತ್ತು ಉಚಿತ ಪ್ರಯಾಣದ ಶಕ್ತಿ ಯೋಜನೆಯಲ್ಲಿ ನ್ಯೂನತೆ ಇದ್ದು, ಇದನ್ನು ಸರಿ ಪಡಿಸುವ ಅಗತ್ಯವಿದೆ. ಕೆಲವರು ವಂಚನೆಯ ಮೂಲಕ ಉಚಿತ ವಿದ್ಯುತ್ ಭಾಗ್ಯದ ಲಾಭ ಪಡೆಯುತ್ತಿದ್ದಾರೆ. ಲಕ್ಷ ಲಕ್ಷ ಸಂಬಳ ಇರುವವರು ಕೂಡ ಬಸ್ ನಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಬಡವರ ಆರ್ಥಿಕ ಸಬಲೀಕರಣದ ಸದುದ್ದೇಶದಿಂದ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಭಾಗ್ಯಗಳು ಅರ್ಹರಿಗೆ ಮಾತ್ರ ತಲುಪಬೇಕಾಗಿದೆ. ಇದಕ್ಕಾಗಿ ಪುನರ್ ಪರಿಶೀಲನೆಯ ಅಗತ್ಯವಿದೆ ಎಂದು ಹೇಳಿದೇನೆಯೇ ಹೊರತು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆ ಎಲ್ಲೂ ಹೇಳಿಲ್ಲ ಎಂದು ಲಕ್ಷ್ಮಣ್ ಸ್ಪಷ್ಟಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ ಮೈಸೂರು- ಕೊಡಗು ಲೋಕಸಭಾ ಕೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರನ್ನು ಗೆಲ್ಲಿಸಲು ಸಾಕಷ್ಟು ಶ್ರಮ ಪಟ್ಟಿದ್ದೇವೆ, ಆದರೆ ಸೋಲಾಗಿದೆ. ಜನರು ನೀಡಿದ ತೀರ್ಪಿಗೆ ತಲೆ ಬಾಗುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಟಾಟು ಮೊಣ್ಣಪ್ಪ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಡಿಸಿಸಿ ಸದಸ್ಯರುಗಳಾದ ಮುಕ್ಕಾಟಿರ ಸಂದೀಪ್ ಹಾಗೂ ವಿಶು ರಂಜಿತ್ ಉಪಸ್ಥಿತರಿದ್ದರು.
Breaking News
- *ನಮ್ಮ ಶೌಚಾಲಯ ನಮ್ಮ ಗೌರವ ವಿಶೇಷ ಆಂದೋಲನಕ್ಕೆ ಚಾಲನೆ*
- *ಕೊಡಗಿನ ನಾಲ್ವರಿಗೆ ಶ್ರೇಷ್ಠ ಸಹಕಾರಿ ಪ್ರಶಸ್ತಿ ಪ್ರದಾನ*
- *71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ : ಹಿರಿಯರ ದೂರದೃಷ್ಟಿಯಿಂದ ಜಿಲ್ಲೆಯ ಸಹಕಾರ ಸಂಘಗಳು ಬಲಿಷ್ಠ : ಎ.ಕೆ.ಮನುಮುತ್ತಪ್ಪ*
- ಕೊಡಗು : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ : ಪುಸ್ತಕ ಅಧ್ಯಯನದಿಂದ ಜ್ಞಾನ ವೃದ್ಧಿ : ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ
- *ಮಡಿಕೇರಿಯಲ್ಲಿ ನವಜಾತ ಶಿಶು ಆರೈಕೆ ಸಪ್ತಾಹ : ನವಜಾತ ಶಿಶುವಿನ ಆರೈಕೆಗೆ ಹೆಚ್ಚಿನ ಆದ್ಯತೆ ನೀಡಿ : ಡಾ.ಮಧುಸೂಧನ್*
- *ಬಿಜೆಪಿಯಿಂದ ದಿನಪೂರ್ತಿ ಧರಣಿ ಸತ್ಯಾಗ್ರಹ*
- *ರಾಜ್ಯ ಸರ್ಕಾರದ ವಿರುದ್ಧ ಜನ ಜಾಗೃತರಾಗಬೇಕು : ಕೊಡಗು ಬಿಜೆಪಿ ಎಸ್ಟಿ ಮೋರ್ಚಾ ಕರೆ*
- *ನ.22 ರಂದು ವಿಶೇಷ ಚೇತನರಿಗೆ ಆಟೋಟ ಸ್ಪರ್ಧೆ*
- *“ತೋಕ್ ನಮ್ಮೆ” ಪ್ರಯುಕ್ತ ರಾಜ್ಯ ಮಟ್ಟದ “ಕೋಕನಟ್ ಶೂಟಿಂಗ್”*
- *ತೋಳೂರು ಶೆಟ್ಟಳ್ಳಿಯಲ್ಲಿ “ಶರಣ ಸಂಸ್ಕೃತಿ” ವಿಚಾರಗೋಷ್ಠಿ : ವಚನಗಳು ಸುಂದರ ಜೀವನದ ದೀವಿಗೆಗಳು : ಮೆ.ನಾ.ವೆಂಕಟನಾಯಕ್ ಅಭಿಮತ*