ಮಡಿಕೇರಿ ಜೂ.13 NEWS DESK : ಇತ್ತೀಚೆಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರ ಸಚಿವ ಸಂಪುಟದಲ್ಲಿ ಪರಿಶಿಷ್ಟರಿಗೆ ಸೂಕ್ತ ಸ್ಥಾನ ನೀಡದೆ ಕಡೆಗಣಿಸಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರ್ನಾಟಕ ರಾಜ್ಯದಲ್ಲಿ 17 ಬಿಜೆಪಿ ಮತ್ತು ಇಬ್ಬರು ಜೆಡಿಎಸ್ ಸೇರಿ 19 ಮಂದಿ ಎನ್‍ಡಿಎ ಮೈತ್ರಿ ಕೂಟದ ಸಂಸದರಿದ್ದಾರೆ. ಇವರಲ್ಲಿ ಐವರು ಪ್ರಬಲ ಸಮುದಾಯದವರಿಗೆ ಮಾತ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ ಪರಿಶಿಷ್ಟರನ್ನು ನಿರ್ಲಕ್ಷಿಸಲಾಗಿದೆ ಎಂದು ಟೀಕಿಸಿದ್ದಾರೆ.
ಬಿಜೆಪಿ ಕೇವಲ ಮತ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿದೆ, ಭಾವನಾತ್ಮಕ ವಿಚಾರಗಳ ಮೂಲಕ ಪರಿಶಿಷ್ಟರ ಮತಗಳನ್ನು ಕೂಡ ತನ್ನೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪರಿಶಿಷ್ಟರು ಬೆಂಬಲಿಸಿದ ಕಾರಣದಿಂದಾಗಿ ರಾಜ್ಯದಲ್ಲಿ ಬಿಜೆಪಿ 17 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ. ಮತ ಗಳಿಕೆಗೆ ಮಾತ್ರ ಪರಿಶಿಷ್ಟರನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದ ನಂತರ ಉನ್ನತ ಸ್ಥಾನಮಾನವನ್ನು ನೀಡದೆ ಕಡೆಗಣಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಯಾವುದೇ ಚುನಾವಣೆ ನಡೆದರೂ ಪರಿಶಿಷ್ಟರ ಬಹುಪಾಲು ಮತಗಳು ಬಿಜೆಪಿ ಪಾಲಾಗುತ್ತಿದೆ. ಆದರೆ ಇದಕ್ಕೆ ಪ್ರತಿಯಾಗಿ ಪರಿಶಿಷ್ಟರ ಋಣ ತೀರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿಲ್ಲ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರವಿದ್ದರೂ ಜಿಲ್ಲೆಯ ಆದಿವಾಸಿಗಳ ಸಂಕಷ್ಟದ ಬದುಕಿಗೆ ಪರಿಹಾರ ದೊರೆತ್ತಿಲ್ಲ. ಇಂದಿಗೂ ಸ್ವಂತ ಸೂರಿಲ್ಲದೆ ಗುಡಿಸಲು ಮತ್ತು ಲೈನ್ ಮನೆಗಳಲ್ಲಿ ಜೀವನ ಸಾಗಿಸಬೇಕಾದ ದುಸ್ಥಿತಿ ಇದೆ. ಬಂಡವಾಳಶಾಹಿಗಳ ಕೋಟ್ಯಾಂತರ ರೂ. ಸಾಲ ಮನ್ನಾ ಮಾಡುತ್ತಿರುವ ಕೇಂದ್ರ ಸರಕಾರ ಬಡ ವರ್ಗವಾಗಿರುವ ಪರಿಶಿಷ್ಟರ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ಪರಿಶಿಷ್ಟರು ಸಾಲದ ಹೊರೆಯಿಂದ ತಪ್ಪಿಸಿಕೊಳ್ಳಲಾಗದೆ ಜೀತ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ಕೊಡಗು ಜಿಲ್ಲೆ ಸೇರಿದಂತೆ ದೇಶವ್ಯಾಪಿ ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ದಿವಾಕರ್ ಆರೋಪಿಸಿದ್ದಾರೆ.
ಕೇವಲ ಮತ ಗಳಿಕೆಗಾಗಿ ಮಾತ್ರ ಪರಿಶಿಷ್ಟರನ್ನು ಓಲೈಕೆ ಮಾಡಿದರೆ ಸಾಲದು. ಅವರ ಅಭಿವೃದ್ಧಿಯ ಬಗ್ಗೆಯೂ ಚಿಂತನೆ ಮಾಡಬೇಕು, ಕಾನೂನು ರಕ್ಷಣೆ ನೀಡಬೇಕು ಮತ್ತು ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನ ನೀಡಿ ರಾಜಕೀಯ ಶಕ್ತಿ ತುಂಬಬೇಕು ಎಂದು ಒತ್ತಾಯಿಸಿದ್ದಾರೆ.
::: ಉದ್ಯೋಗಕ್ಕಾಗಿ ಹೋರಾಟ :::
ವಾರ್ಷಿಕ 2 ಕೋಟಿ ಉದ್ಯೋಗ ನೀಡುವುದಾಗಿ ಬಿಜೆಪಿ ನೀಡಿದ್ದ ಭರವಸೆ ಸುಳ್ಳಾಗಿದೆ. ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವಕ, ಯುವತಿಯರು ಉದ್ಯೋಗ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಕೊಟ್ಟ ಮಾತಿನಂತೆ ಸರಕಾರ ಉದ್ಯೋಗ ನೀಡಬೇಕೆಂದು ಒತ್ತಾಯಿಸಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.