ವಿರಾಜಪೇಟೆ ಜೂ.13 NEWS DESK : ಬ್ರಿಟಿಷರ ವಿರುದ್ಧ ಯುದ್ಧ ಮಾಡಿ ಗೆದ್ದ ಪ್ರಥಮ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಇಂದಿಗೂ ಮಹಿಳೆಯರಿಗೆ ಆದರ್ಶ ಪ್ರಾಯವಾಗಿದ್ದಾರೆ ಎಂದು ಹನುಗೋಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಿ.ಕೆ ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗದಿಂದ ನಡೆದ ವಿಶೇಷ ಉಪನ್ಯಾಸನ ಕಾರ್ಯಕ್ರಮದಲ್ಲಿ “ಕರ್ನಾಟಕ ಸ್ವಾತಂತ್ರ್ಯ ಹೋರಾಟದ ಮೈಲುಗಳು” ಎಂಬ ವಿಷಯದ ಕುರಿತು ಮಾತನಾಡಿದ ಅವರು, ಕಿತ್ತೂರಿನ ಚಿಕ್ಕ ಸಂಸ್ಥಾನದಲ್ಲಿ ರಾಜ್ಯಭಾರ ಮಾಡುತ್ತಿದ್ದ ರಾಣಿ ಚೆನ್ನಮ್ಮ, ಬ್ರಿಟೀಷರು ತಮ್ಮ ಸ್ವಾತಂತ್ರ್ಯ ಸಂಸ್ಥಾನ ಹಾಗೂ ಬೊಕ್ಕಸದ ಮೇಲೆ ಕಣ್ಣು ಹಾಕಿದ್ದನ್ನು ಕಂಡು ಪ್ರತಿ ಉತ್ತರ ಕೊಟ್ಟ ದಿಟ್ಟ ಮಹಿಳೆ ಇಂದಿಗೂ ನಮಗೆಲ್ಲ ಆದರ್ಶರಾಗಿದ್ದಾರೆ. ಚೆನ್ನಮ್ಮನವರ ದೃಢ ನಿರ್ಧಾರ, ಹೋರಾಟದ ಮನೋಭಾವ ಎಲ್ಲರಿಗೂ ತಿಳಿಸುವ ಸಲುವಾಗಿ ಪ್ರತಿ ವರ್ಷ ರಾಜ್ಯ ಸರ್ಕಾರ ಅಕ್ಟೋಬರ್ ತಿಂಗಳಿನಲ್ಲಿ ಕಿತ್ತೂರು ಉತ್ಸವ ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಕೆ.ಸಿ.ದಯಾನಂದ್, ಸ್ವಾತಂತ್ರ್ಯ ಎಂಬುದು ನಮ್ಮ ಭಾರತಕ್ಕೆ ಅತಿ ಸುಲಭವಾಗಿ ಸಿಕ್ಕಿದ್ದಲ್ಲ, ಅನೇಕ ಮಹಾನ್ ವ್ಯಕ್ತಿಗಳ ಪರಿಶ್ರಮದ ಫಲವಾಗಿ ದೊರಕಿದೆ. ಅದನ್ನು ಇಂದಿನ ಯುವ ಪೀಳಿಗೆ ಸರಿಯಾದ ರೂಪದಲ್ಲಿ ಬಳಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ.ರುದ್ರ, ಟಿ.ಎಲ್.ತ್ಯಾಗರಾಜ್, ಕನ್ನಡ ವಿಭಾಗದ ಮುಖ್ಯಸ್ಥ ಬಸವರಾಜ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಡಯಾನ ಸ್ವಾಗತಿಸಿದರು, ಆಯಿಷಾ ನಿರೂಪಿಸಿದರು. ಕೀರ್ತನ್ ವಂದಿಸಿದರು.