ಮಡಿಕೇರಿ ಜೂ.14 NEWS DESK : ಸುಂಟಿಕೊಪ್ಪ ಹೋಬಳಿ ಅತ್ತೂರು ನಲ್ಲೂರು ಗ್ರಾಮದಲ್ಲಿ ದಲಿತರು ಹಾಗೂ ಹಿಂದುಳಿದವರ ಮೇಲೆ ನಾಲ್ವರು ವ್ಯಕ್ತಿಗಳಿಂದ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು, ತಕ್ಷಣ ಇವರುಗಳನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರಿಗೆ ದೂರು ನೀಡಿದ್ದಾರೆ.
ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಹೆಚ್.ಎಲ್.ದಿವಾಕರ್ ಮಾತನಾಡಿ ಅತ್ತೂರು-ನಲ್ಲೂರು ಗ್ರಾಮದಲ್ಲಿ ಸುಮಾರು 150 ಮಂದಿ ದಲಿತರು ಹಾಗೂ ಹಿಂದುಳಿದವರು ವಾಸ ಮಾಡುತ್ತಿದ್ದು, ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಆದರೆ ಅದೇ ಗ್ರಾಮದ ನಾಲ್ವರು ಯುವಕರು ಸಂಘಟನೆಗಳ ಹೆಸರಿನಲ್ಲಿ ದೌರ್ಜನ್ಯ ನಡೆಸಿ ನೆಮ್ಮದಿ ಕೆಡಿಸಿದ್ದಾರೆ ಎಂದು ಆರೋಪಿಸಿದರು.
ಕೆಲವು ದಿನಗಳ ಹಿಂದೆ ಗ್ರಾಮದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಪ್ರಕರಣದ ಹಾದಿ ತಪ್ಪಿಸಲು ಯತ್ನಿಸಿದ್ದಾರೆ. ಇದೇ ರೀತಿ ಮುಂದುವರೆದರೆ ಮುಂದೆ ದೊಡ್ಡ ಅನಾಹುತ ಸಂಭವಿಸುವ ಆತಂಕವಿದೆ. ಆದ್ದರಿಂದ ತಕ್ಷಣ ನಾಲ್ವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಸ್ವಾತಿ ಮಾತನಾಡಿ, ಕೆಲವು ದಿನಗಳ ಹಿಂದೆ ಗ್ರಾಮದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಆರೋಪಿಗಳು ಗ್ರಾಮದಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದು, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರಾದ ಹೆಚ್.ಎಸ್.ಚೈತ್ರ, ಜೆ.ಬಿ.ಲಲಿತಾ, ಹೆಚ್.ಡಿ.ಪ್ರಸಾದ್, ಅಂಕಶೆಟ್ಟಿ, ಆನಂದ್ ಮತ್ತಿತರ ಗ್ರಾಮಸ್ಥರು ಮನವಿ ನೀಡುವ ಸಂದರ್ಭ ಹಾಜರಿದ್ದರು.