ಮಡಿಕೇರಿ ಜೂ.14 NEWS DESK : ರಾಷ್ಟ್ರೀಯ ಸೇವಾಯೋಜನೆ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಹೆಚ್ಚಿಸಲು ಮತ್ತು ಪ್ರತಿಭೆಗೆ ಉತ್ತಮ ವೇದಿಕೆಯನ್ನು ಕಲ್ಪಸಿಕೊಡುತ್ತದೆ ಎಂದು ರಾಜ್ಯಮಟ್ಟ ಅತ್ಯುತ್ತಮ ಎನ್.ಎಸ್.ಎಸ್ ಅಧಿಕಾರಿ ಪ್ರಶಸ್ತಿ ವಿಜೇತೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಸ್ನಾತಕೋತ್ತರ ವಿಭಾಗದ ಅರ್ಥಶಾಸ್ತ್ರ ಉಪನ್ಯಾಸಕಿ ಮಧುರ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಹಾಗೂ ಕೊಡಗು ವಿಶ್ವ ವಿದ್ಯಾನಿಲಯಯ ಅಧಿನಕ್ಕೆ ಒಳಪಡುವ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ 2023-24ನೇ ಸಾಲಿನ ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು, ಮಾತನಾಡಿದರು.
ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ. ಇದು ನಾಯಕತ್ವಗುಣ ಬೆಳೆಸುವುದರ ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ ಕಲ್ಪಿಸುತ್ತದೆ ಎಂದರು.
ಎನ್‍ಎಸ್‍ಎಸ್‍ನಲ್ಲಿ ಕೇವಲ ಕೆಲಸ ಮಾಡಬೇಕು ಎಂದುಕೊಳ್ಳದೆ ಸ್ವಯಂ ಸೇವಕರ ಸೇವೆ ಎಂಬುದನ್ನು ಅರಿತುಕೊಳ್ಳಬೇಕು. ಇಲ್ಲಿ ಕಲಿತ ಗುಣಗಳನ್ನ ಜೀವನದಲ್ಲೂ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ. ಬಿ.ರಾಘವ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ನಿಸ್ವಾರ್ಥ ಸೇವೆ ಸಲ್ಲಿಸಲು ಕಲಿಸಿಕೊಡುತ್ತದೆ. ಇದನ್ನ ವಿದ್ಯಾರ್ಥಿಗಳು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಕೊಡಗು ವಿಶ್ವವಿದ್ಯಾಲಯದ ಚಿಕ್ಕಅಳುವಾರ ಸಾಮಜಕಾರ್ಯ ಸ್ನಾತಕೋತ್ತರ ವಿಭಾಗದ ಉಪನ್ಯಾಸಕ ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾಯೋಜನೆ ಗ್ರಾಮ ಜೀವನ, ಹೊಂದಾಣಿಕೆಯ ಜೀವನ ಹಾಗೂ ಸರಳ ಜೀವನದ ಮಹತ್ವವನ್ನು ತಿಳಿಸುತ್ತದೆ.
ವಿದ್ಯಾರ್ಥಿಗಳು ಎನ್‍ಎಸ್‍ಎಸ್ ಶಿಬಿರಗಳಲ್ಲಿ ಕಳೆಯುವ ದಿನಗಳು ಬಹಳ ಪ್ರಮುಖವಾದುದ್ದು, ನನಗಲ್ಲ ನಿನಗೆ ಎನ್ನುವ ಧ್ಯೇಯದೊಡನೆ ಸರ್ವರನ್ನೂ ಸಮಾನವಾಗಿ ಕಾಣುವ ಮನೋಭಾವವನ್ನು ಹುಟ್ಟುಹಾಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಡಾ. ಗಾಯತ್ರಿ, ಡಾ. ಮಹದೇವಯ್ಯ, ಶಿಬಿರಾಧಿಕಾರಿಗಳಾದ ಅಲೋಕ್ ಬಿಜೈ, ಖುರ್ಷಿದಾ ಭಾನು, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ರಾಷ್ಟ್ರೀಯ ಸೇವಾಯೋಜನೆಯ ಹಿರಿಯ ನಾಯಕ ನಾಯಕ, ನಾಯಕಿರು ಹಾಗೂ ಸ್ವಯಂ ಸೇವಕರು ಹಾಜರಿದ್ದರು.
ಸಾಧನೆ ಮಾಡಿದ ವಿದ್ಯಾರ್ಥಿಗಳನ್ನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.