ಸುಂಟಿಕೊಪ್ಪ ಜೂ.15 NEWS DESK : ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ಹಲವು ಸಮಸ್ಯೆಗಳ ಆಗರವಾಗಿದ್ದು, ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿದೆ.
2ನೇ ಅವಧಿಯ ಅಧ್ಯಕ್ಷರ ಆಯ್ಕೆಯಾಗಿ ಒಂದು ವರ್ಷ ಸಮೀಪಿಸುತ್ತಿದೆ. ಜಿಲ್ಲೆಯ ಎಲ್ಲಾ ಪಂಚಾಯಿತಿಗಳ ಗ್ರಾಮ ಸಭೆ, ನೂತನ ಅಧ್ಯಕ್ಷರ ಆಯ್ಕೆಯಾದ ನಂತರ ಹಲವು ಅಭಿವೃದ್ಧಿ ಕಾರ್ಯಗಳು ನಡೆದರೂ ಮಾದಾಪುರ ಗ್ರಾ.ಪಂ ನ ಗ್ರಾಮಸಭೆ ಮಾತ್ರ ಇನ್ನೂ ನಡೆಸಲು ಆಡಳಿತ ಮಂಡಳಿಗೆ ಸಮಯಾವಕಾಶ ಕೂಡಿ ಬಂದಂತೆ ಕಾಣುತ್ತಿಲ್ಲ.
ಆಗಾಗ್ಗೆ ಮಾದಾಪುರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯ ವರ್ಗಾವಣೆಯಾಗುತ್ತಿದ್ದು, ಈಗ ಅಧಿಕಾರ ಸ್ವೀಕರಿಸಿಕೊಂಡ ಪಿಡಿಓ ಅವರಿಗೆ ಐಗೂರು ಹಾಗೂ ಮಾದಾಪುರ ಪಂಚಾಯಿತಿಯ ಹೆಚ್ಚುವರಿ ಜವಾಬ್ದಾರಿ ನೀಡುವುದರಿಂದ ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಗ್ರಾಮಸ್ಥರು ಆರೋಪಿಸಿದ್ದಾರೆ.
ಜಂಬೂರು ಗ್ರಾಮದಲ್ಲಿ ಕಾಮಗಾರಿ ಮಿಷನ್ ಯೋಜನೆಯ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಜ್ವಲಂತವಾಗಿ ಉಳಿದಿದೆ. ಜಲಜೀವನ್ ಯೋಜನೆ ಅರ್ಧದಲೇ ಕೆಲಸ ಸ್ಥಗಿತಗೊಂಡಿದ್ದರೂ ಈ ಬಗ್ಗೆ ಗ್ರಾ.ಪಂ ಏನು ಕ್ರಮಕೈಗೊಂಡಿಲ್ಲ ದೂರಿದ್ದಾರೆ.
ಸೆಪ್ಟಿಂಕ್ ಟ್ಯಾಂಕ್ನ ನೀರು ಚರಂಡಿಯಲ್ಲಿ ನಿಂತು ದುರ್ವಾಸನೆ ಬರುತ್ತಿದ್ದು, ಜಂಬೂರು ಫೀಲ್ಡ್ ಮಾರ್ಷಲ್ ಬಡಾವಣೆಯ ನಿವಾಸಿಗಳು ಮೂಗು ಮುಚ್ಚಿಕೊಂಡು ಬದುಕು ದೂಡುತ್ತಿದ್ದಾರೆ. ಕಸವಿಲೇವಾರಿ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ತಾತ್ಕಾಲಿಕವಾಗಿ ತೋಟಗಾರಿಕ ಇಲಾಖೆ ಜಾಗದಲ್ಲಿ ಕಸ ವಿಲೇವಾರಿಗೊಳಿಸಲಾಗುತ್ತಿದ್ದು, ಇಲ್ಲಿನ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.
ಮೂವತೋಕ್ಲುವಿನಲ್ಲಿ ಕಸವಿಲೇವಾರಿ ಪೈಸಾರಿ ಜಾಗ ಗುರುತಿಸಿದ್ದರೂ, ಪಂಚಾಯಿತಿ ಖಾತೆಗೆ ಇನ್ನೂ ದಾಖಲಿಸಿಕೊಳ್ಳಲಾಗದೆ ಸಮಸ್ಯೆಯಾಗಿದೆ. ಈ ಜಾಗದಲ್ಲಿ ನಿವೇಶನ ರಹಿತರಿಗೂ 2 ಎಕ್ರೆ ಜಾಗ ಗುರುತಿಸಲಾಗಿದ್ದು, ಅದು ಕಾರ್ಯರೂಪಕ್ಕೆ ಬಂದಿಲ್ಲ. ಮನೆ ಇಲ್ಲದೆ ನೂರಾರು ಮಂದಿ ಪಂಚಾಯಿತಿಗೆ ಅರ್ಜಿಸಲ್ಲಿಸಿ ಜಾತಕಪಕ್ಷಿಯಂತೆ ದಶಕಗಳ ಕಾಲದಿಂದ ಕಾಯುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಗ್ರಾ.ಪಂ ಆಡಳಿತ ಮಂಡಳಿ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.