ಮಡಿಕೇರಿ ಜೂ.18 NEWS DESK : ಕೊಡಗಿನ ನಾಪೋಕ್ಲಿನಲ್ಲಿ ಜನಿಸಿ ಭಾರತದ ಮೂಲೆ ಮೂಲೆಯಲ್ಲಿ ಹಾಕಿ ಆಟ ಅಡಿ ತೆರೆಯ ಮರೆಯಲ್ಲಿ ಯಾವ ಪ್ರಚಾರವೂ ಬಯಸದೆ, ಯಾವ ಪದವಿಯನ್ನು ಅಲಂಕರಿಸದ ಅದ್ಭುತ ಆಟಗಾರ ಅರೆಯಡ ರವಿ ಅಯ್ಯಪ್ಪ. ಅರೆಯಡ ಉತ್ತಯ್ಯ ಹಾಗೂ ಗೌರಿ ಕಾಮವ್ವ ( ತಾಮನೆ ಕಂಗಾಂಡ) ಅವರ 5ನೇ ಪುತ್ರನಾಗಿ ರವಿ ಅಯ್ಯಪ್ಪ ಅವರು ಜನಿಸಿದರು.
ಶಿಕ್ಷಣ : ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ನಾಪೋಕ್ಲಿನಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಪದವಿಪೂರ್ವ ಕಾಲೇಜು ನಾಪೋಕ್ಲಿನಲ್ಲಿ ಹಾಗೂ ಕಲೆಯಲ್ಲಿ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದರು.
ಹಾಕಿ ಪಂದ್ಯಾಟಗಳು : 1974ರಲ್ಲಿ ಭಾರತೀಯ ಸೈನ್ಯದ ಆರ್ಟಿಲರಿಗೆ ಪ್ರವೇಶ ಪಡೆದರು. 1980-84 ವರೆಗೆ ದಕ್ಷಿಣ ಕಮಾಂಡ್ ನ ಹಾಕಿ ಆಟಗಾರನಾಗಿ ಆಡಿದರು. 1985-87 ರವರೆಗೆ ಸರ್ವಿಸಸ್ ಪರ ಹಾಕಿ ಆಡಿದರು. ರಂಗಸ್ವಾಮಿ ಕಪ್ ಆಡಿದ ಅದ್ಭುತ ಆಟಗಾರ.
ಭಾರತದ ಆಯ್ಕೆ ಶಿಬಿರ : 1982-83 ರಲ್ಲಿ ಭಾರತದ ಆಯ್ಕೆ ಶಿಬಿರಕ್ಕೆ ಆಯ್ಕೆಯಾದರು.
ಆಲ್ ಇಂಡಿಯಾ ಹಾಕಿ ಟೂರ್ನಮೆಂಟ್ಸ್ : ನೆಹರು ಗೋಲ್ಡ್ ಕಪ್, ಇಂದಿರಾ ಗೋಲ್ಡ್ ಕಪ್, ಆಘಾ ಖಾನ್ ಗೋಲ್ಡ್ ಕಪ್, ಬಾಂಬೆ ಗೋಲ್ಡ್ ಕಪ್, ಕೆ ಡಿ ಸಿಂಗ್ ಗೋಲ್ಡ್ ಕಪ್, ಎಂ.ಸಿ.ಸಿ ಗೋಲ್ಡ್ ಕಪ್, ಮೈಸೂರು ಗೋಲ್ಡ್ ಕಪ್ ನಲ್ಲಿ ಭಾಗವಹಿಸಿದ್ದರು.
ಅತ್ಯುತ್ತಮ ಮುನ್ನಡೆ ಆಟಗಾರ : ಸಿಂಧಿಯಾ ಗೋಲ್ಡ್ ಕಪ್, ಧ್ಯಾನ್ ಚಂದ್ ಗೋಲ್ಡ್ ಕಪ್ ಹಾಗೂ ರೂಪ್ ಸಿಂಗ್ ಗೋಲ್ಡ್ ಕಪ್ ನಲ್ಲಿ ಅತ್ಯುತ್ತಮ ಆಟಗಾರ ಎಂಬ ಬಿರುದು ಪಡೆದರು.
ಪ್ರದರ್ಶನ ಪಂದ್ಯಾವಳಿಗಳು : ನೆದರ್ಲ್ಯಾಂಡ್ ನ ವಿರುದ್ಧ ಗ್ವಾಲಿಯರ್ 11, ಕೀನ್ಯಾ ವಿರುದ್ಧ ಬಾಂಬೆ 11, ಯು.ಎಸ್.ಎಸ್.ಆರ್ ನ ವಿರುದ್ಧ ಜಾನ್ಸಿ 11, ಮಲೇಶಿಯಾ ಹಾಗು ಶ್ರೀಲಂಕಾದ ವಿರುದ್ಧ ದಕ್ಷಿಣ ಕಮಾಂಡ್ 11 ಪರ ಪ್ರದರ್ಶನ ಪಂದ್ಯಾವಳಿಗಳಲ್ಲಿ ಆಡಿದರು.
N.I.S ತರಬೇತಿದಾರ : ಇವರು ಅತ್ಯಂತ ಕಠಿಣವಾದ N.I.S ತರಬೇತಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಅತ್ಯುತ್ತಮ ಹಾಕಿ ತರಬೇತಿದಾರ.
ಇವರು 1984-85 ರ ವರೆಗೆ ದಕ್ಷಿಣ ಕಮಾಂಡ್ ನ ತರಬೇತಿದಾರರಾಗಿದ್ದರು. 1988ರಲ್ಲಿ ಸರ್ವಿಸಸ್ ಹಾಗೂ 1989ರಲ್ಲಿ ಜೂನಿಯರ್ ಸರ್ವಿಸಸ್ ನ ತರಬೇತಿದಾರನಾಗಿ ಕಾರ್ಯನಿರ್ವಹಿಸಿದರು.
ರವಿ ಅಯ್ಯಪ್ಪನವರು 1993ರಲ್ಲಿ ಭಾರತೀಯ ಸೈನ್ಯದಿಂದ ಸುಬೇದಾರ್ ಆಗಿ ನಿವೃತ್ತಿ ಪಡೆದರು.
B.E.L ಗೆ ಸೇರ್ಪಡೆ : ಭಾರತೀಯ ಸೈನ್ಯದಿಂದ ನಿವೃತ್ತಿ ಪಡೆದ ನಂತರ 1995ರಲ್ಲಿ B.E.L ನ ಸಹಾಯಕ ಕ್ರೀಡಾ ಅಧಿಕಾರಿಯಾಗಿ ನೇಮಕಗೊಂಡರು. B.E.L ನ ಪರವಾಗಿ ಆಟಗಾರನಾಗಿಯೂ ಹಾಗೂ ತರಬೇತಿದಾರರನ್ನಾಗಿಯೂ 20 ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ಬ್ರಿಗೇಡಿಯರ್ ಬಲ್ ಬೀರ್ ಸಿಂಗ್ ಅನಿಸಿಕೆ
ಭಾರತ ಕಂಡ ಅದ್ಭುತ ಆಟಗಾರ ಅರ್ಜುನ ಪ್ರಶಸ್ತಿ ವಿಜೇತ ಹಾಗೂ ಬ್ರಿಗೇಡಿಯರ್ ಒಲಂಪಿಯನ್ ಬಲ್ ಬೀರ್ ಸಿಂಗ್ ಅವರ ಪ್ರೀತಿಯ ಆಟಗಾರ ರವಿ ಅಯ್ಯಪ್ಪ ಇವರು ಭಾರತ ಆಡುವುದು ಖಚಿತ ಎಂದೇ ಪದೇ ಪದೇ ಜ್ಞಾಪಿಸುತ್ತಿದ್ದರು. ಇವರ ಕಲೆಯನ್ನು ಪಾಕಿಸ್ತಾನದ ಹಾಕಿ ಆಟಗಾರ ಖಲೀಮ್ ಉಲ್ಲಾ ಅವರಿಗೆ ಹೋಲಿಸುತ್ತಿದ್ದರು. ರೈಟ್ ಔಟ್ ಆಡುವಾಗ ಸೈಡ್ ಲೈನ್ ನ ಮೇಲೆ ಬಹಳಷ್ಟು ವೇಗದಿಂದ ನುಗ್ಗುವಂತಹ ಅದ್ಭುತ ಆಟಗಾರನೆಂದು ಮೆಚ್ಚುಗೆ ಪಡೆದಿದ್ದರು. ಇವರ ಕೆಲವು ಹಾಕಿಯ ಕೌಶಲ್ಯಗಳು ಇಂದಿಗೂ ಮರೆಯುವಂತಿಲ್ಲ. ಕೋವಿಲ್ ಪಟ್ಟಿಯಲ್ಲಿ ಇವರು ಹೊಡೆದ ಅದ್ಭುತ ಗೋಲ್ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಅದಕ್ಕೆ ಲಕ್ಷ್ಮಿ ಮಿಲ್ಸ್ ನ ಮಾಲೀಕರು ಸಫಾರಿ ಸೂಟ್ ಅನ್ನು ಉಡುಗೊರೆಯಾಗಿ ನೀಡಿದ್ದರು.
ಒಳ ರಾಜಕೀಯ : ಒಳ್ಳೆಯ ಹಾಕಿ ಆಟಗಾರನಾಗಿಯೂ ಕೂಡ ಭಾರತಕ್ಕೆ ಆಡಲಿಲ್ಲವೆಂಬ ಕೊರಗು ಸದಾ ನಮ್ಮನ್ನು ಕಾಡುತ್ತದೆ. ಇತ್ತೀಚಿಗೆ ಕುಂಡ್ಯೋಳಂಡ ಹಾಕಿ ಹಬ್ಬದಲ್ಲಿ ಸನ್ಮಾನ ಸ್ವೀಕರಿಸಿ ಎಲ್ಲರೊಡನೆ ಬೆರೆತರು. ಅಂದೇ ಪ್ರಥಮ ಬಾರಿಗೆ ಅವರು ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು.
ಅಣ್ಣನಿಂದ ಪ್ರೇರಣೆ : ಅವರ ತಮ್ಮ ಅರೆಯಡ ಗಣೇಶ್ ಅದ್ಭುತ ಹಾಕಿ ಆಟಗಾರ. ಬಹಳಷ್ಟು ಮಕ್ಕಳಿಗೆ ಪ್ರತಿದಿನ ಬೆಳ್ಳಂಬೆಳಗ್ಗೆ ನಾಪೋಕ್ಲಿನ ಹಾಕಿ ಮೈದಾನದಲ್ಲಿ, ತರಬೇತಿಯನ್ನು ನೀಡುತ್ತಾ ಹಾಕಿಯನ್ನು ಉಳಿಸುತ್ತಾ, ಬೆಳೆಸುತ್ತಾ ಬರುತ್ತಿರುವ ಇವರಿಗೆ ಎಲ್ಲಾ ಹಾಕಿ ಅಭಿಮಾನಿಗಳ ಪರವಾಗಿ ಧನ್ಯವಾದಗಳು.
ಇವರ ಪತ್ನಿ ಪ್ರೇಮಾ ಪೊನ್ನಮ್ಮ(ತಾಮನೆ ಮುದ್ದಂಡ) ನಿವೃತ್ತ ಪ್ರೌಢಶಾಲಾ ಶಿಕ್ಷಕಿ ಹಾಗೂ ರಾಜ್ಯದ ಅತ್ಯುತ್ತಮ ದೈಹಿಕ ಶಿಕ್ಷಕಿ ಎಂಬ ಪ್ರಶಸ್ತಿ ಗಿಟ್ಟಿಸಿಕೊಂಡವರು. ಅಲ್ಲದೆ ಪ್ರೇಮಾ ಪೊನ್ನಮ್ಮನವರು ರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಕಬಡ್ಡಿ ಹಾಗೂ ರಾಜ್ಯ ಮಟ್ಟದ ಹಾಕಿ ಪಂದ್ಯಾಟಗಳಲ್ಲಿ ಭಾಗವಹಿಸಿದ್ದರು.
ಪ್ರಸ್ತುತ ರವಿ ಅಯ್ಯಪ್ಪನವರು ತಮ್ಮ ಪತ್ನಿ ಹಾಗೂ ನಾಲ್ಕು ಮಕ್ಕಳಾದ ದಿವ್ಯ, ಕಾವ್ಯ, ಕನೋಜ್ ಹಾಗೂ ಕರಣ್ ಅವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರ ನಾಲ್ಕು ಮಕ್ಕಳು ಇಂಜಿನಿಯರಿಂಗ್ ಪದವೀಧರರು. ಇವರು ಹಾಕಿಯಲ್ಲಿ ಮಾಡಿದ ಸಾಧನೆಯನ್ನು ಇಂದಿಗೂ ನೆನೆಯುತ್ತಾ, ಇಂದಿನ ಯುವ ಆಟಗಾರರಿಗೆ ಪ್ರೇರಣೆಯಾಗಿರಲಿ ಹಾಗೂ ಇವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಎಲ್ಲ ಕ್ರೀಡಾ ಅಭಿಮಾನಿಗಳ ಪರವಾಗಿ ಆಶಿಸುತ್ತೇನೆ.
ಕ್ರೀಡಾ ವಿಶ್ಲೇಷಣೆ : ಚೆಪ್ಪುಡೀರ ಕಾರ್ಯಪ್ಪ