ಕೂಡಿಗೆ ಜೂ.18 NEWS DESK : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಹಾಗೂ ಹುಲುಗುಂದ ವ್ಯಾಪ್ತಿಯ ಹಿಂದೂ ರುದ್ರಭೂಮಿಗೆ ಧರ್ಮಸ್ಥಳ ಸಂಘದ ವತಿಯಿಂದ ಸಿಲಿಕಾನ್ ಚೇಂಬರ್ ಮಂಜೂರಾತಿ ಪತ್ರವನ್ನು ನೀಡಲಾಯಿತು.
ಚಿಕ್ಕತ್ತೂರು ಕಾರ್ಯಕ್ಷೇತ್ರದ ವತಿಯಿಂದ ಹುಲಗುಂದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 1,51,630 ರೂ. ಮಂಜೂರಾತಿ ಪತ್ರವನ್ನು ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ರೋಹಿತ್, ಪರಮಪೂಜ್ಯ ಡಾ. ಡಿ.ವೀರೇಂದ್ರ ಹೆಗಡೆಯವರ ಆಶೀರ್ವಾದದಿಂದ ಕೊಡಗು ಜಿಲ್ಲೆಯ ಸಮುದಾಯ ಭವನ, ಶಾಲೆಗಳ ದುರಸ್ತಿ, ಮೃತಪಟ್ಟವರಿಗೆ ಧನಸಹಾಯ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನೀಡುತ್ತ ಬರಲಾಗುತ್ತಿದೆ.
ಅದೇ ರೀತಿ ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಹಾರಂಗಿ-ಹುಲಗುಂದ ಗ್ರಾಮದ ಹಿಂದೂರುದ್ರ ಭೂಮಿಗೆ 1,51,630 ರೂ ವೆಚ್ಚದಲ್ಲಿ ಆದೇಶ ಪತ್ರವನ್ನು ನೀಡಲಾಗಿದೆ ಎಂದು ತಿಳಿಸಿದರು.
ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿ, ಹಾರಂಗಿ-ಹುಲಗುಂದ ಗ್ರಾಮದ ಹಿಂದೂ ರುದ್ರ ಭೂಮಿಗೆ ಶವ ಸುಡುವ ಸಿಲಿಕಾನ್ ಚೇಂಬರ್ ಅಗತ್ಯವಿತ್ತು. ಮುಂದೆ ಮಳೆಗಾಲ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಸಿಲಿಕಾನ್ ಚೇಂಬರ್ ನಮಗೆ ಸಾಕಷ್ಟು ಪ್ರಯೋಜನಕಾರಿಯಾಗಲಿದೆ. ಸೌದೆ ಉಳಿತಾಯದೊಂದಿಗೆ ದೈಹಿಕ ಶ್ರಮವು ಬಹುಪಾಲು ತಪ್ಪುತ್ತದೆ. ಸರಿಯಾಗಿ ಬಿಸಿಯಾಗುವ ಈ ಚೇಂಬರ್ ನಿಂದಾಗಿ ಮೃತ ದೇಹಗಳ ಅಂತ್ಯಕ್ರಿಯೆಯು ಸುಗಮವಾಗುತ್ತದೆ ಎಂದರು.
ಇದೇ ಸಂದರ್ಭ ಹಾರಂಗಿ ಹಾಗೂ ಹುಲುಗುಂದ ಗ್ರಾಮಸ್ಥರ ಪರವಾಗಿ ಧರ್ಮಸ್ಥಳ ಸಂಘದ ರೋಹಿತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೂಡುಮಂಗಳೂರು ಗ್ರಾ.ಪಂ ಸದಸ್ಯ ಮಣಿಕಂಠ, ಮೇಲ್ವಿಚಾರಕ ಯತೀಶ್, ಸೇವಾ ಪ್ರತಿನಿಧಿಗಳಾದ ಸಂಗೀತ, ದಿನೇಶ್, ಧರ್ಮಸ್ಥಳ ಸಂಘದ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ : ಕೆ.ಆರ್.ಗಣೇಶ್ ಕೂಡಿಗೆ