ಮಡಿಕೇರಿ ಜೂ.21 NEWS DESK : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ದೇವಟ್ಪರಂಬ್ ನರಮೇಧದ ಸ್ಮಾರಕ ಸ್ಥಳದಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು.
ಹತ್ಯೆಗೀಡಾದ ಹಿರಿಯರಿಗೆ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಪುಷ್ಪ ನಮನ ಸಲ್ಲಿಸಿ ಕೊಡವ ಜನಾಂಗದ ಯೋಗಕ್ಷೇಮಕ್ಕಾಗಿ ಮತ್ತು ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯನ್ನು ಸಾಧಿಸಲು ಶಕ್ತಿಯನ್ನು ನೀಡುವಂತೆ ಪ್ರಾರ್ಥಿಸಲಾಯಿತು.
ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳು ಮತ್ತು ಎಸ್ಟಿ ಟ್ಯಾಗ್ ನೀಡಬೇಕು. ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಕೊಡವ ಬುಡಕಟ್ಟಿನ ಮಾತೃ ಮಣ್ಣಿನಲ್ಲಿ ಐತಿಹಾಸಿಕ ನಿರಂತರತೆಗಾಗಿ ಸಾರ್ವತ್ರಿಕ ಮನ್ನಣೆಯನ್ನು ಕಲ್ಪಿಸಬೇಕು. ದೇವಟ್ಪರಂಬ್ನಲ್ಲಿ ಅಂತರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕವನ್ನು ನಿರ್ಮಿಸಬೇಕು. ವಿಶ್ವರಾಷ್ಟ್ರ ಸಂಸ್ಥೆಯ ಅಂತರರಾಷ್ಟ್ರೀಯ ಹತ್ಯಾಕಾಂಡದ ಸ್ಮರಣಾರ್ಥ ಪಟ್ಟಿಯಲ್ಲಿ ದೇವಟ್ಪರಂಬು ಕೊಡವರ ದುರಂತ ನರಮೇಧವನ್ನು ಸೇರಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.
ಗಾಳಿಯಲ್ಲಿ ಗುಂಡು ಹಾರಿಸಿ ಹಿರಿಯರಿಗೆ ಗೌರವ ಅರ್ಪಿಸಿದರು. ಸಿಎನ್ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಮಂದಪಂಡ ಮನೋಜ್, ಅರೆಯಡ ಗಿರೀಶ್ ಹಾಗೂ ಚೀಯಬೇರ ಸತೀಶ್ ಹಾಜರಿದ್ದರು.