ಮಡಿಕೇರಿ ಜೂ.22 NEWS DESK : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಪ್ರತಿಕೃತಿ ದಹಿಸಿದ ಬಿಜೆಪಿ ಕ್ರಮ ಖಂಡನೀಯವೆಂದು ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಯಾವುದೇ ಕಾರಣವಿಲ್ಲದೆ ಒಬ್ಬ ಜನಪ್ರಿಯ ನಾಯಕ ಹಾಗೂ ನಿಸ್ವಾರ್ಥ ರಾಜಕಾರಣಿಯ ಪ್ರತಿಕೃತಿಯನ್ನು ದಹಿಸಿರುವುದು ಬಿಜೆಪಿ ಮಂದಿಯ ಕ್ಷುಲ್ಲಕ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಕೊಡಗು ಅತ್ಯಂತ ಪ್ರಬುದ್ಧ ರಾಜಕಾರಣಿಗಳಿಂದ ಕೂಡಿರುವ ಜಿಲ್ಲೆಯಾಗಿದೆ. ಆದರೆ ವಿರಾಜಪೇಟೆಯಲ್ಲಿ ನಡೆದ ಪ್ರತಿಭಟನೆ ಸಂದರ್ಭ ಪೊನ್ನಣ್ಣ ಅವರ ಪ್ರತಿಕೃತಿ ದಹಿಸುವ ಮೂಲಕ ಬಿಜೆಪಿ ಸಣ್ಣತನವನ್ನು ಪ್ರದರ್ಶಿಸಿದೆ ಎಂದು ಟೀಕಿಸಿದ್ದಾರೆ.
ಜಾತ್ಯತೀತ ಮತ್ತು ಪಕ್ಷಾತೀತವಾಗಿ ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುತ್ತಿರುವ ಪೊನ್ನಣ್ಣ ಅವರು ವಿವಿಧ ಅಭಿವೃದ್ಧಿ ಕಾರ್ಯಗಳ ಮೂಲಕ ಜನಪ್ರಿಯತೆಯನ್ನು ಗಳಿಸುತ್ತಿದ್ದಾರೆ. ರಾಜ್ಯ ಮಟ್ಟದಲ್ಲಿ ಪ್ರಭಾವಿಯಾಗಿರುವ ಪೊನ್ನಣ್ಣ ಅವರ ಪರ ದಿನದಿಂದ ದಿನಕ್ಕೆ ಜನ ಬೆಂಬಲ ಹೆಚ್ಚಾಗುತ್ತಿದೆ. ಇದನ್ನು ಸಹಿಸದ ಬಿಜೆಪಿ, ಪ್ರತಿಭಟನೆಯ ನಿಯಮಗಳನ್ನು ಗಾಳಿಗೆ ತೂರಿ, ಕಾನೂನಿಗೆ ವಿರುದ್ಧವಾಗಿ ಪ್ರತಿಕೃತಿ ದಹಿಸಿ ಪೊನ್ನಣ್ಣ ಅವರನ್ನು ತೇಜೋವಧೆ ಮಾಡಲು ಪ್ರಯತ್ನಿಸಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯ ಕೀಳು ಮಟ್ಟದ ವರ್ತನೆಯಿಂದ ಜಿಲ್ಲೆಯ ಜನರಿಗೆ ನೋವಾಗಿದೆ. ಆದ್ದರಿಂದ ಪ್ರತಿಕೃತಿ ದಹಿಸಿದವರು ಪೊನ್ನಣ್ಣ ಅವರ ಬಳಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿರುವ ಸುರಯ್ಯ ಅಬ್ರಾರ್, ಬಿಜೆಪಿಯ ಈ ರೀತಿಯ ಪ್ರತಿಭಟನೆಗಳಿಗೆ ಕಾಂಗ್ರೆಸ್ ಅಂಜುವುದಿಲ್ಲವೆಂದು ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕೂಡ ಅವಮಾನಿಸಿರುವ ಬಿಜೆಪಿ ನಡೆ ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.