ಮಡಿಕೇರಿ ಜು.11 NEWS DESK : ವ್ಯಕ್ತಿಯೊಬ್ಬರನ್ನು ಅಟ್ಟಾಡಿಸಿ ಆತಂಕ ಸೃಷ್ಟಿಸಿದ ಕಾಡಾನೆ ಶೆಡ್ ನ್ನು ಧ್ವಂಸಗೊಳಿಸಿದ ಘಟನೆ ಮಡಿಕೇರಿ ತಾಲ್ಲೂಕಿನ ಊರುಬೈಲು ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಪಲ್ತಾಡು ದೇವಸ್ಯ ರವಿ ಎಂಬುವವರು ರಬ್ಬರ್ ಟ್ಯಾಪಿಂಗ್ ಕೆಲಸ ಮುಗಿಸಿ ಶೆಡ್ ಗೆ ಹಿಂತಿರುಗುತ್ತಿದ್ದಾಗ ಕಾಡಾನೆ ದಿಢೀರ್ ಪ್ರತ್ಯಕ್ಷವಾಗಿದೆ. ರವಿ ಅವರ ಮೇಲೆ ದಾಳಿ ಮಾಡಲು ಯತ್ನಿಸಿದಾಗ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಪಕ್ಕದಲ್ಲೇ ಇದ್ದ ರಬ್ಬರ್ ಶೆಡ್ ನ ಮೇಲೆ ಕೋಪ ತೀರಿಸಿಕೊಂಡ ಕಾಡಾನೆ ಅದನ್ನು ಧ್ವಂಸಗೊಳಿಸಿ ಅಲ್ಲಿಂದ ಕಾಲ್ಕಿತ್ತಿತು.
ಕಳೆದ 15 ದಿನಗಳಿಂದ ಊರುಬೈಲು ಮತ್ತು ಅಕ್ಕಪಕ್ಕದ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಾಡಾನೆ ಉಪಟಳ ತಡೆಗೆ ಅರಣ್ಯ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಆನೆ ದಾಳಿಯಿಂದ ಉಂಟಾದ ಹಾನಿಗೆ ತಕ್ಷಣ ಪರಿಹಾರ ನೀಡಬೇಕೆಂದು ಸಾಮಾಜಿಕ ಕಾರ್ಯಕರ್ತ ಹಾಗೂ ಗ್ರಾಮಸ್ಥ ರಜಿತ್ ಪಲ್ತಾಡು ದೇವಸ್ಯ ಒತ್ತಾಯಿಸಿದ್ದಾರೆ.