ಸುಂಟಿಕೊಪ್ಪ ಜು.11 NEWS DESK : ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ರೂ.9.50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸ್ವಚ್ಛ ಸಂಕೀರ್ಣ ಘಟಕವನ್ನು ಮಡಿಕೇರಿ ಕ್ಷೇತ್ರದ ಶಾಸಕÀ ಡಾ.ಮಂತರ್ ಗೌಡ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕರು ಕಂಬಿಬಾಣೆ ವ್ಯಾಪ್ತಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಕಾಡಾನೆಗಳು ರಾತ್ರಿ ಹಗಲೆನ್ನದೆ ಗ್ರಾಮದಲ್ಲಿ ಸಂಚರಿಸಿ ಆತಂಕ ಸೃಷ್ಟಿಸುತ್ತಿರುವ ಬಗ್ಗೆ ಗ್ರಾ.ಪಂ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಗಮನ ಸೆಳೆದಾಗ ಸ್ಪಂದಿಸಿದ ಶಾಸಕರು, ರೈಲ್ವೆ ಕಂಬಿಗಳ ಬೇಲಿ ನಿರ್ಮಾಣ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ಜಿಲ್ಲಾ ಪಂಚಾಯತ್ ರಾಜ್ ಅಭಿಯಂತರ ಫಯಾಜ್ ಆಹ್ಮದ್ ಮಾತನಾಡಿ ಗ್ರಾಮದ ರಸ್ತೆಗಳ ಅಭಿವೃದ್ಧಿಗಾಗಿ ಈಗಾಗಲೇ ಸರಕಾರದಿಂದ ಅಂದಾಜು 51 ಲಕ್ಷ ರೂ. ಮತ್ತು ಅತ್ತೂರು ನಲ್ಲೂರು ಸರಕಾರಿ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ದುರಸ್ತಿಗಾಗಿ ರೂ.1.80 ಲಕ್ಷ ರೂ. ಮೊತ್ತವನ್ನು ಬಿಡುಗಡೆಗೊಂಡಿದೆ ಎಂದು ತಿಳಿಸಿದರು. ಈ ಸಂದರ್ಭ ತಾ.ಪಂ ನಿರ್ವಾಹಣಾಧಿಕಾರಿ ವೀರಣ್ಣ, ಗ್ರಾ.ಪಂ ಅಧ್ಯಕ್ಷೆ ರಾಧ, ಉಪಾಧ್ಯಕ್ಷ ಶಂಕರ, ಸದಸ್ಯರುಗಳಾದ ಆರ್.ಆರ್.ಮೋಹನ, ಕೆ.ಬಿ.ಕೃಷ್ಣ, ಆಶ್ವಿನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಲ್.ಮಧುಮತಿ, ಗ್ರಾ.ಪಂ ಮಾಜಿ ಅಧ್ಯಕ್ಷ ಚಂದ್ರಹಾಸ ರೈ, ಮಾಜಿ ಸದಸ್ಯರುಗಳಾದ ಎ.ಪಿ.ಹ್ಯಾರಿ, ಸಿ.ಬಿ.ಚಂಗಪ್ಪ, ಶಾಲಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಮುಸ್ತಫ, 7ನೇ ಹೊಸಕೋಟೆ ಗ್ರಾ.ಪಂ ಸದಸ್ಯ ಮುಸ್ತ್ತಫ, ಮಾಜಿ ಸದಸ್ಯ ಅವಲಕುಟ್ಟಿ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿಯಮಿತದ ಅಧ್ಯಕ್ಷ ಕೆ.ಎಸ್.ಮಂಜುನಾಥ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.