ಮಡಿಕೇರಿ ಜು.12 NEWS DESK : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತ ಕಮ್ಯುನಿಷ್ಟ್(ಮಾಕ್ಸವಾದಿ ಲೆನಿನ್ ವಾದಿ) ಮಾಸ್ ಲೈನ್ ಪಕ್ಷ ಕೊಡಗು ಜಿಲ್ಲಾ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪದಾಧಿಕಾರಿಗಳು ಹಾಗೂ ನಿವೇಶನ ರಹಿತರು ಘೋಷಣೆಗಳನ್ನು ಕೂಗಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಸಿಪಿಐ(ಎಂಎಲ್)ನ ರಾಜ್ಯ ಸಮಿತಿ ಸದಸ್ಯ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ನಿವೇಶನ ರಹಿತ ಆದಿವಾಸಿಗಳನ್ನು ಲೈನ್ ಮನೆಯಿಂದ ಬಿಡುಗಡೆಗೊಳಿಸಿ ಸ್ವಂತ ಸೂರು ಮತ್ತು ಕೃಷಿ ಭೂಮಿ ನೀಡಬೇಕು, ಅಕ್ರಮ ಸಕ್ರಮ ಯೋಜನೆಡಿಯಲ್ಲಿ ಸಲ್ಲಿಸಿರುವ 50, 53, 57, 94ಸಿ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು, ಉಳ್ಳವರಿಗೆ ಭೂಮಿ ಗುತ್ತಿಗೆ ನೀಡುವ ಆದೇಶವನ್ನು ರದ್ದುಗೊಳಿಸಬೇಕು, ಅಕ್ರಮ ಒತ್ತುವರಿ ಭೂಮಿಯನ್ನು ತೆರವುಗೊಳಿಸಬೇಕು. ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬಡವರಿಗೆ ಹಾಗೂ ಆದಿವಾಸಿಗಳಿಗೆ ನೀವೇಶನ ಕಾಯ್ದಿರಿಸಬೇಕು, ಆರ್.ಟಿ.ಸಿ.ಯನ್ನು ಸರ್ಕಾರಿ ಪೈಸಾರಿ ಎಂದು ಮಾಡಿರುವುದನ್ನು ರದ್ದುಗೊಳಿಸಬೇಕು, ನಾಗರಹೊಳೆ ಅರಣ್ಯದ ಮಧ್ಯ ಭಾಗದಲ್ಲಿರುವ ಆದಿವಾಸಿಗಳಿಗೆ ಅದೇ ಅರಣ್ಯದಂಚಿನಲ್ಲಿ ಪುನರ್ ವಸತಿ ಕಲ್ಪಿಸಬೇಕು, ಆದಿವಾಸಿ ಪಾರಂಪರಿಕ ಸಮುದಾಯ ಅರಣ್ಯ ಹಕ್ಕು ಕಾಯಿದೆಯನ್ನು ತಕ್ಷಣ ಜಾರಿಗೆ ತರಬೇಕು, ನಿರುದ್ಯೋಗಿಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮೂಲಕ ಹೆಚ್ಚಿನ ಸೌಲಭ್ಯಗಳನ್ನು ನೀಡಬೇಕು, ಆದಿವಾಸಿ ಪುನರ್ ವಸತಿ ಕೇಂದ್ರ ಬ್ಯಾಡಗೊಟ್ಟ ಹಾಗೂ ಬಸವನಳ್ಳಿಯಲ್ಲಿ ನಡೆದಿರುವ ಅಕ್ರಮ ಮತ್ತು ಅಪೂರ್ಣಗೊಂಡಿರುವ ಕಾಮಗಾರಿಯನ್ನು ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಸಮಿತಿ ಸದಸ್ಯ ಜೆ.ಎಂ.ಸುರೇಶ್, ಜಿಲ್ಲಾ ಕಾರ್ಯದರ್ಶಿ ವೈ.ಎಂ.ಸುರೇಶ್, ಆದಿವಾಸಿಗಳಾದ ಎಚ್.ಜೆ.ಪ್ರಕಾಶ್, ವೈ.ಎಂ.ಮೋಹನ್, ರಾಧಾ, ನಳಿನಾಕ್ಷಿ, ಬಾಬು, ಮುತ್ತ ಮತ್ತಿತರರು ಪಾಲ್ಗೊಂಡಿದ್ದರು.