ಮಡಿಕೇರಿ ಜು.13 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಶ್ವ ಜನಸಂಖ್ಯೆ ದಿನಾಚರಣೆ ನಡೆಯಿತು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಂ.ಯು.ಚೇತನ್ ಹಾಗೂ ವಿರಾಜಪೇಟೆ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ದಯಾನಂದ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಂ.ಯು.ಚೇತನ್, ಮಾತನಾಡಿ 1987ರ ಜುಲೈ 11 ರಂದು ವಿಶ್ವ ಜನಸಂಖ್ಯೆ 500 ಕೋಟಿ ತಲುಪಿದ ಕಾರಣ ಈ ದಿನ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ.
ಮದುವೆಯಾಗಲು ಗಂಡಿಗೆ 21 ವರ್ಷ ಮತ್ತು ಹೆಣ್ಣಿಗೆ ಕನಿಷ್ಠ 18 ವರ್ಷಗಳು ತುಂಬಿರಬೇಕು. ಮದುವೆಯ ನಂತರ ಕನಿಷ್ಠ 2 ವರ್ಷಗಳವರೆಗೂ ಮೊದಲನೇ ಮಗುವನ್ನು ಪಡೆಯಬಾರದು. ಎರಡು ಮಕ್ಕಳ ನಡುವೆ ಕನಿಷ್ಠ 3 ವರ್ಷಗಳ ಅಂತರವಿರಬೇಕು. 2 ಮಕ್ಕಳನ್ನು ಹೊಂದಿರುವ ದಂಪತಿಗಳು ಶಾಶ್ವತ ಕುಟುಂಬ ಕಲ್ಯಾಣ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಎಲ್ಲಾ ಅರ್ಹ ದಂಪತಿಗಳು ಕುಟುಂಬ ಕಲ್ಯಾಣ ವಿಧಾನವನ್ನು ಅನುಸರಿಸಿ ಚಿಕ್ಕ ಕುಟುಂಬವನ್ನು ರೂಪಿಸಿಕೊಳ್ಳುವುದು. ಪೋಷಕರು ತಮ್ಮ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಉತ್ತೇಜನ ಕೊಡಬೇಕು. ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಪುರುಷರ ಸಹಭಾಗಿತ್ವ ಬಹಳ ಪ್ರಾಮುಖ್ಯವಾದದ್ದು ಎಂದು ತಿಳಿಸಿದರು. ವಿರಾಜಪೇಟೆ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ದಯಾನಂದ ಮಾತನಾಡಿ, ವಿಶ್ವ ಜನಸಂಖ್ಯಾ ದಿನಾಚರಣೆಯ ಉದ್ದೇಶ, ಇತಿಹಾಸ, ಜನಸಂಖ್ಯಾ ಸ್ಪೋಟದಿಂದ ಉಂಟಾಗುವ ಪರಿಣಾಮಗಳು, ವಸತಿ ಮತ್ತು ಆಹಾರ ಸಮಸ್ಯೆ, ನಿರುದ್ಯೋಗ, ಬಡತನ, ಹಸಿವು, ಆರ್ಥಿಕ ಅಸಮಾನತೆ, ಅನಕ್ಷರತೆ, ನೈಸರ್ಗಿಕ ಸಂಪನ್ಮೂಲಗಳ ಕೊರತೆ, ಅನೈರ್ಮಲ್ಯತೆಗೆ ಕಾರಣವಾಗುತ್ತದೆ ಎಂದು ಅಂಕಿ ಅಂಶಗಳ ಮೂಲಕ ಸವಿವರವಾಗಿ ತಿಳಿಸಿಕೊಟ್ಟರು.
ಜನಸಂಖ್ಯಾ ಹೆಚ್ಚಳದಿಂದ ಆರ್ಥಿಕ ಅಭಿವೃದ್ದಿ, ಉದ್ಯೋಗ, ಆದಾಯದ ಹಂಚಿಕೆ, ಬಡತನ ಸಾಮಾಜಿಕ ರಕ್ಷಣೆಯ ಮೇಲೆ ಪರಿಣಾಮ ಬೀರುತ್ತದೆ. ಗ್ರಾಮೀಣ ಭಾಗದಲ್ಲಿ ಗಂಡು ಮಗುವೆ ವಂಶೋದ್ಧಾರಕ, ಗಂಡು ಮಗು ಇಲ್ಲದಿದ್ದರೆ ಮೋಕ್ಷ ಸಿಗುವುದಿಲ್ಲ, ಗಂಡು ಮಗು ಜನಿಸುವವರೆಗೂ ಮಕ್ಕಳನ್ನು ಪಡೆಯಬೇಕು ಎಂಬ ಮೂಢ ನಂಬಿಕೆಯಿಂದ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ ಮಾತನಾಡಿ, ಜನಸಂಖ್ಯಾ ನಿಯಂತ್ರಣಕ್ಕೆ ಸರ್ಕಾರ, ಎನ್‍ಜಿಒ ಹಾಗೂ ಸಮುದಾಯ ಸಂಸ್ಥೆಗಳ ವತಿಯಿಂದ ಜಾಗೃತಿ ಅಭಿಯಾನಗಳು, ವಿಶ್ವ ವಿದ್ಯಾನಿಲಯಗಳ ಸಹಕಾರದಿಂದ ಸಾರ್ವಜನಿಕ ಉಪನ್ಯಾಸಗಳು, ಚರ್ಚೆಗಳು, ಆರೋಗ್ಯ ಶಿಬಿರಗಳು, ಸಮುದಾಯದ ಸಜ್ಜುಗೊಳಿಸುವಿಕೆ ಸಹಕಾರದಿಂದ ಸಾರ್ವಜನಿಕರಿಗೆ ಕುಟುಂಬ ಕಲ್ಯಾಣ ಯೋಜನೆಗಳು, ಸಂತಾನೋತ್ಪತ್ತಿ, ಆರೋಗ್ಯ ಸಂಬಂಧಿತ ಸುಸ್ಥಿರ ಅಭಿವೃದ್ದಿ ಗುರಿಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಿ ಜನಸಂಖ್ಯಾ ನಿಯಂತ್ರಣಕ್ಕೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಾಥ್ ನಿರೂಪಿಸಿದರು ಹಾಗೂ ವಂದಿಸಿದರು. ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿ ದೇಚಮ್ಮ ಹಾಗೂ ನಗರ ಆರೋಗ್ಯ ಕೇಂದ್ರ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಮತ್ತು ತಾಲ್ಲೂಕು ಆಶಾ ಮೆಂಟರ್ ಹಾಗೂ ತಾಲ್ಲೂಕು ಮಟ್ಟದ ಆಶಾಕಾರ್ಯಕರ್ತೆಯರು ಭಾಗವಹಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ, ಸ್ವಾಗತಿಸಿದರು.