ಮಡಿಕೇರಿ ಜು.13 NEWS DESK : ಪ್ರಾಮಾಣಿಕ ಬದ್ಧತೆ ಇದ್ದಲ್ಲಿ ಯಶಸ್ಸು ಸಾಧ್ಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ರೇಣುಕಾಚಾರ್ಯ ಕಾನೂನು ಮಹಾವಿದ್ಯಾಲಯ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆದ ಅಭಿನಂದನ ಸಮಾರಂಭದಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿಗಳಾದ ವೀರಪ್ಪರವರು ಪ್ರಾಮಾಣಿಕ ವ್ಯಕ್ತಿ. ಅವರನ್ನು ಅಭಿನಂದಿಸಲಿಕ್ಕೆ ಆಗಮಿಸಿದ ಯುವ ವಕೀಲರು ಅವರ ಜೀವನದಾರಿಯನ್ನ ಅಳವಡಿಸಿಕೊಳ್ಳಬೇಕು. ಅವರ ಮಾರ್ಗದರ್ಶನ ಕಂಡುಕೊಳ್ಳುತ್ತಾ ತಮ್ಮ ಜೀವನವನ್ನು ನಡೆಸಿದರೆ ಖಂಡಿತವಾಗಿ ಎಲ್ಲರೂ ಯಶಸ್ಸನ್ನು ಕಾಣಲು ಸಾಧ್ಯವಿದೆ ಎಂದರು.
ವಕೀಲರ ವೃತ್ತಿ ಕೆಲವೊಮ್ಮೆ ಹತ್ತಿರದಿಂದ ಕಂಡಾಗ ಎಲ್ಲೋ ದಾರಿ ತಪ್ಪುತ್ತಿದೆ ಎಂದ ಅವರು ಯುವ ವಕೀಲರು ತಮ್ಮ ವೃತ್ತಿಯನ್ನು ಪ್ರಮಾಣಿಕತೆಯಿಂದ ನಡೆಸಿ ಅದಕ್ಕೆ ಫಲ ಸಿಗುತ್ತದೆ ಎಂದು ಹೇಳಿದರು. ಉಪ ಲೋಕಾಯುಕ್ತರಾಗಿ ಆಯ್ಕೆ ಆಗಿರುವ ನ್ಯಾಯಮೂರ್ತಿ ವೀರಪ್ಪ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ಯಶಸ್ಸು ಇನ್ನಷ್ಟು ವಿಸ್ತಾರವಾಗಲೆಂದು ಹಾರೈಸುತ್ತೇನೆ. ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ, ಉಪ ಲೋಕಾಯುಕ್ತ ರನ್ನಾಗಿ ಮಾಡಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ, ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ಸಮಿತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪೊನ್ನಣ್ಣ ಹೇಳಿದರು.
ಈ ಸಂದರ್ಭ ಹಿರಿಯ ವಕೀಲರಾದ ಉದಯ್ ಹೊಳ್ಳ, ವಕೀಲರ ಸಂಘದ ವಿವೇಕ್ ಸುಬ್ಬಾರೆಡ್ಡಿ ಮತ್ತು ಹಿರಿಯ ವಕೀಲರಾದ ಎಂ.ಟಿ.ನಾಣಯ್ಯ ಮತ್ತಿತರ ಗಣ್ಯರು ಹಾಜರಿದ್ದರು.