ಮಡಿಕೇರಿ ಜು.13 NEWS DESK : ಸಮುದಾಯ ವೈದ್ಯಶಾಸ್ತ್ರವಿಭಾಗ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಬೋಧಕ ಆಸ್ಪತ್ರೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೊಡಗು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಮಡಿಕೇರಿಯಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ನಗರದ ಮೈತ್ರಿ ಹಾಲ್ ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ ಸಾಮಾನ್ಯ ವೈದ್ಯ ಶಾಸ್ತ್ರ, ಶಸ್ತ್ರ ಚಿಕಿತ್ಸೆ, ಕಣ್ಣು, ಪ್ರಸೂತಿ ಮತ್ತು ಸ್ತ್ರೀ ರೋಗ, ಮಕ್ಕಳ ವಿಭಾಗ, ಚರ್ಮ ರೋಗ, ಕಿವಿ ಮೂಗು ಗಂಟಲು, ಮೂಳೆ ಮತ್ತು ಕೀಲು, ಸಮುದಾಯ ವೈದ್ಯಕೀಯ ವಿಭಾಗದ ನುರಿತ ತಜ್ಞ ವೈದ್ಯರು ವೈದ್ಯಕೀಯ ಸೇವೆಯನ್ನು ನೀಡಿದರು. ಸುಮಾರು 100 ಕ್ಕಿಂತ ಹೆಚ್ಚು ಹೊರ ರೋಗಿಗಳು ರಕ್ತದೊತ್ತಡ ಮದುಮೇಹ ರಕ್ತಹೀನತೇ ಇನ್ನಿತರ ರೋಗಗಳಿಗೆ ಚಿಕಿತ್ಸೆ ಪಡೆದರು.
ಭಾರತೀಯ ರೆಡ್ ಕ್ರಾಸ್‌ನ ಸಭಾಪತಿಗಳಾದ ಬಿ.ಕೆ.ರವೀಂದ್ರ ರೈ ಮಾತನಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ, ನವದೆಹಲಿಯ ಶಿಫರಸ್ಸಿನಂತೆ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸಮಾಜದಲ್ಲಿರುವ ರೋಗರುಜಿನಗಳು ಮತ್ತು ತಡೆಗಟ್ಟುವಿಕೆ ಬಗ್ಗೆ ಅರಿವು ಮೂಡಿಸಲು “ಕುಟುಂಬ ದತ್ತು ಕಾರ್ಯಕ್ರಮ”ವನ್ನು ಆರೋಗ್ಯ ಶಿಬಿರದ ಮೂಲಕ ಪರಿಚಯಿಸಲಾಗುತ್ತಿದೆ. ಈ ಮೂಲಕ ದತ್ತು ಪಡೆದಿರುವ ಪ್ರತಿ ಗ್ರಾಮದಲ್ಲಿ ಒಂದು ವೈದ್ಯಕೀಯ ಶಿಬಿರವನ್ನು ನಡೆಸಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನುರಿತ ತಜ್ಞರಿಂದ ಉಚಿತ ವೈದ್ಯಕೀಯ ತಪಾಸಣೆಯನ್ನು ಕೈಗೊಳ್ಳುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಶಿಬಿರದಲ್ಲಿ ಭಾರತೀಯ ರೆಡ್ ಕ್ರಾಸ್‌ನ ಕಾರ್ಯದರ್ಶಿ ಮುರಳೀಧರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ನಂಜುಡಯ್ಯ, ಸಮುದಾಯ ವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ರಾಮಚಂದ್ರ ಕಾಮತ್ ಹಾಗೂ ಸಿಬ್ಬದ್ದಿ ವರ್ಗದವರು, ನಗರ ಪ್ರಾಥಮಿಕ ಕೇಂದ್ರದ ಕಾರ್ಯಕರ್ತರು, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.