ಮಡಿಕೇರಿ ಜು.17 NEWS DESK : ಕಿರುಗೂರು, ಬಾಳೆಲೆ, ಪೊನ್ನಪ್ಪಸಂತೆ, ಮಾಯಮುಡಿ ಮತ್ತು ನಿಟ್ಟೂರು ಗ್ರಾ.ಪಂ ವ್ಯಾಪ್ತಿಯ ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಅನೇಕ ದಿನಗಳಿಂದ ಔಷಧಿಯ ಕೊರತೆ ಎದುರಾಗಿದೆ. ತಕ್ಷಣ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಿರುಗೂರು ಗ್ರಾ.ಪಂ ಅಧ್ಯಕ್ಷ ಹಾಗೂ ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಆರೋಗ್ಯ ರಕ್ಷಾ ಸಮಿತಿಯ ಸಭೆ ಸಕಾಲದಲ್ಲಿ ನಡೆಯುತ್ತಿಲ್ಲ. ಅಪರೂಪಕ್ಕೊಮ್ಮೆ ನಡೆಯುವ ಸಭೆಗೆ ತಾಲ್ಲೂಕು ವೈದ್ಯಾಧಿಕಾರಿಗಳು ಹಾಜರಾಗುತ್ತಿಲ್ಲ. ಗ್ರಾಮಸ್ಥರ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ಜುಲೈ 16 ರಂದು ಬಾಳೆಲೆ ಆರೋಗ್ಯ ರಕ್ಷಾ ಸಮಿತಿಯ ಸಭೆ ನಡೆಯಿತು. ಸರ್ಕಾರದ ಸುತ್ತೋಲೆ ಪ್ರಕಾರ ಮೂರು ತಿಂಗಳಿಗೊಮ್ಮೆ ನಡೆಯಬೇಕಾದ ಸಭೆ ಒಂದು ವರ್ಷದ ನಂತರ ನಡೆದಿದೆ. ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರ ಕುಂದು ಕೊರತೆಯ ಬಗ್ಗೆ ಗಮನ ಹರಿಸುವುದು ಈ ಸಭೆಯ ಉದ್ದೇಶವಾಗಿದೆ. ಆದರೆ ಮಂಗಳವಾರ ನಡೆದ ಸಭೆಗೆ ವಿರಾಜಪೇಟೆ ತಾಲ್ಲೂಕು ವೈದ್ಯಾಧಿಕಾರಿಗಳು ಗೈರು ಹಾಜರಾಗಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ವೈದ್ಯಾಧಿಕಾರಿಗಳನ್ನು ಕರೆದಿದ್ದೇವೆ, ಅವರು ಬಂದಿಲ್ಲ ಎನ್ನುವ ಹಾರಿಕೆಯ ಉತ್ತರವಷ್ಟೇ ದೊರೆತ್ತಿದೆ. ಅರ್ಥಹೀನ ಸಭೆ ನಡೆಸಿ ಏನು ಪ್ರಯೋಜನ ಎಂದು ರಾಕೇಶ್ ದೇವಯ್ಯ ಪ್ರಶ್ನಿಸಿದ್ದಾರೆ.
ಆರೋಗ್ಯ ಕೇಂದ್ರದಲ್ಲಿ ಕಳೆದ ಅನೇಕ ದಿನಗಳಿಂದ ಸೂಕ್ತ ಔಷಧಿಗಳು ದೊರೆಯುತ್ತಿಲ್ಲವೆಂದು ಗ್ರಾಮಸ್ಥರು ನನ್ನ ಬಳಿ ದೂರಿಕೊಂಡಿದ್ದಾರೆ. ಈ ಬಗ್ಗೆ ಸಭೆಯಲ್ಲಿ ನಾನು ಗಮನ ಸೆಳೆದ ಸಂದರ್ಭ ಔಷಧಿಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ ಮತ್ತು ತಾಲ್ಲೂಕು ಆರೋಗ್ಯ ಕೇಂದ್ರದಿಂದ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಆರೋಗ್ಯ ಕೇಂದ್ರದಲ್ಲಿ ಸಮಸ್ಯೆಗಳಿದ್ದರೂ ವೈದ್ಯಾಧಿಕಾರಿಗಳು ಸಭೆಗೆ ಗೈರು ಹಾಜರಾಗಿರುವುದು ಎಷ್ಟು ಸರಿ, ಜನ ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.
ಈ ಭಾಗದ ಹಾಡಿ ನಿವಾಸಿಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು, ಕಾರ್ಮಿಕರು, ರೈತರು ಮತ್ತಿತರ ಗ್ರಾಮಸ್ಥರು ಬಾಳೆಲೆ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಮಳೆಗಾಳಿ ತೀವ್ರವಾಗಿರುವ ಮತ್ತು ಡೆಂಗ್ಯು ಪ್ರಕರಣಗಳು ಮಿತಿ ಮೀರುತ್ತಿರುವ ಈ ದಿನಗಳಲ್ಲಿ ಔಷಧಿಯನ್ನು ದಾಸ್ತಾನು ಇಡುವುದು ಅಗತ್ಯವಾಗಿದೆ. ಹಿರಿಯ ಅಧಿಕಾರಿಗಳು ತಕ್ಷಣ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅವ್ಯವಸ್ಥೆಯ ಬಗ್ಗೆ ಗಮನ ಹರಿಸಬೇಕು ಮತ್ತು ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕು ಎಂದು ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ.