ಮಡಿಕೇರಿ ಜು.17 NEWS DESK : ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಜು.18 ಮತ್ತು 19 ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಸೋಮವಾರಪೇಟೆಯ ಶಾಂತಳ್ಳಿಯಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 10 ಇಂಚು ಮಳೆ ಸುರಿದಿದೆ. ಕಾವೇರಿಯ ಉಗಮ ಸ್ಥಾನ ತಲಕಾವೇರಿ ವ್ಯಾಪ್ತಿಯ ಭಾಗಮಂಡಲದಲ್ಲಿ 7 ಇಂಚು ಮಳೆಯಾಗಿದೆ.
::: ಶಾಲೆಗಳಿಗೆ ರಜೆ :::
ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜು.18 ರಂದು ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಅಂಗನವಾಡಿ ಹಾಗೂ ಶಾಲಾ, ಕಾಲೇಜುಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ರಜೆ ಘೋಷಿಸಿದ್ದಾರೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1347.30 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 594.88 ಮಿ.ಮೀ ಮಳೆಯಾಗಿತ್ತು. ಬ್ರಹ್ಮಗಿರಿಯ ತಪ್ಪಲಿನಲ್ಲಿ ಸುರಿಯುತ್ತಿರುವ ಭಾರೀ ಮಳೆೆಯಿಂದ ಏರ್ಪಟ್ಟಿರುವ ಕಾವೇರಿಯ ಪ್ರವಾಹದಿಂದ ನದಿ ಪಾತ್ರದ ಹಲ ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, ಬಿರುಮಳೆÉಯಿಂದ ಜಿಲ್ಲೆಯಾದ್ಯಂತ ಅವಘಡಗಳ ಸರಮಾಲೆ ಮುಂದುವರೆದಿದೆ. ಭಾಗಮಂಡಲ ಮತ್ತು ತಲಕಾವೇರಿ ವ್ಯಾಪ್ತಿಯಲ್ಲಿ ಕಿರು ತೊರೆಗಳು ಉಕ್ಕಿ ಹರಿದು ಕಾವೇರಿಯ ಪ್ರವಾಹದ ಮಟ್ಟ ಮತ್ತಷ್ಟು ಹೆಚ್ಚಿದೆ. ಭಾಗಮಂಡಲದ ಅಯ್ಯಂಗೇರಿ ರಸ್ತೆ ಹಾಗೂ ಮಡಿಕೇರಿಯನ್ನು ಸಂಪರ್ಕಿಸುವ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಗ್ರಾಮೀಣರ ಬದುಕು ಅಸ್ತವ್ಯಸ್ತಗೊಂಡಿದೆ.
::: ಸೇತುವೆ ಮುಳುಗಡೆ :::
ದಕ್ಷಿಣ ಕೊಡಗಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿದು ಪ್ರವಾಹವೇರ್ಪಟ್ಟಿದೆ. ಇದರ ಪರಿಣಾಮ ಶ್ರೀಮಂಗಲ-ನಾಲ್ಕೇರಿ ಸೇತುವೆ ಮುಳುಗಡೆಯಾಗಿದ್ದು, ಸಮಪರ್ಕ ಕಡಿತಗೊಂಡಿದೆ. ಭಾರೀ ಮಳೆಯಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಇದರ ಪರಿಣಾಮ ಮಡಿಕೇರಿ- ವಿರಾಜಪೇಟೆ ಮುಖ್ಯ ರಸ್ತೆಯ ಬೇತ್ರಿ ಸೇತುವೆ ಮೇಲೆ ನೀರು ಬರಲು ಇನ್ನು ಕೆಲವೆ ಅಡಿ ಬಾಕಿ ಉಳಿದಿದೆ.ಮಳೆÉಯ ಪ್ರಮಾಣ ಹೆಚ್ಚಿದಲ್ಲಿ ಸೇತುವೆ ಮುಳುಗಡೆಯಾಗುವ ಸಂಭವವಿದೆ.
::: ಸಂಪರ್ಕ ಕಡಿತ :::
ಕಾವೇರಿ ನದಿ ಪಾತ್ರದಲ್ಲಿ ಬರುವ ನಾಪೋಕ್ಲುವಿನಿಂದ ಮೂರ್ನಾಡುವಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಬೊಳಿಬಾಣೆಯಲ್ಲಿ, ರಸ್ತೆಯ ಮೇಲೆ 4 ಅಡಿಯಷ್ಟು ಪ್ರವಾಹದ ನೀರು ಆವರಿಸಿದ್ದು ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಚೆರಿಯಪರಂಬು- ಕಲ್ಲುಮೊಟ್ಟೆ ಸಂಪರ್ಕರಸ್ತೆ, ನಾಪೋಕ್ಲು -ಬಲಮುರಿ ಮಾರ್ಗದ ಮಕ್ಕಿಕಡವು ರಸ್ತೆ ಜಾಲಾವೃತಗೊಂಡು ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಈ ಹಿನ್ನೆಲೆ ವಾಹನ ಸಂಚಾರ ನಾಪೋಕ್ಲು, ಕೊಟ್ಟಮುಡಿ, ಕೇಮಾಟ್, ಕುಯ್ಯಂಗೇರಿ, ಹೊದ್ದೂರು ಬಳಸು ಹಾದಿಯನ್ನು ಅವಲಂಬಿಸುವಂತಾಗಿದೆ. ನಾಪೋಕ್ಲು -ಕೊಟ್ಟಮುಡಿ ಬೆಟ್ಟಗೇರಿ ಮಡಿಕೇರಿ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಮಳೆಯ ಅಬ್ಬರ ಇದೇ ರೀತಿ ಮುಂದುವರೆದರೆ ನಾಪೋಕ್ಲು-ಕೊಟ್ಟಮುಡಿ ಸಂಪರ್ಕ ರಸ್ತೆ ಸೇರಿದಂತೆ ನಾಪೋಕ್ಲು ವ್ಯಾಪ್ತಿಯ ಎಲ್ಲಾ ಪ್ರಮುಖ ರಸ್ತೆಗಳ ಸಂಚಾರ ಕಡಿತಗೊಳ್ಳುವ ಸಾಧ್ಯತೆ ಇದೆ.
::: ಪ್ರವಾಹ ಭೀತಿ :::
ನಾಪೋಕ್ಲುವಿನಲ್ಲಿ ಧಾರಾಕಾರ ಮಳೆಯಿಂದ ಸಾಮಾನ್ಯ ಜನ ಜೀವನ ಅಸ್ತವ್ಯಸ್ತವಾಗಿದ್ದು, ನದಿ ಪಾತ್ರದಲ್ಲಿ ಬರುವ ಚೆರಿಯಪರಂಬು ಸೇರಿದಂತೆ ನದಿ ದಡದಲ್ಲಿ ವಾಸಿಸುವ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.
::: ಧರೆಗುರುಳುತ್ತಿರುವ ಮರಗಳು :::
ಭಾಗಮಂಡಲದಿಂದ ತಲಕಾವೇರಿಗೆ ತೆರಳುವ ಮಾರ್ಗದಲ್ಲಿ ಮರ ಬಿದ್ದು ಸಂಚಾರಕ್ಕೆ ತೊಡಕುಂಟಾಗಿತ್ತಾದರು, ಬಳಿಕ ಅದನ್ನು ತೆರವುಗೊಳಿಸಲಾಗಿದೆ. ಭಾಗಮಂಡಲದಲ್ಲಿ ಮೇಲ್ಸೇತುವೆ ಇರುವುದರಿಂದ ಕಾವೇರಿಯ ಪ್ರವಾಹ ಇದ್ದರು ಸಂಚಾರಕ್ಕೆ ಯಾವುದೇ ತೊಡಕುಂಟಾಗುವುದಿಲ್ಲ. ವಿರಾಜಪೇಟೆ- ಗೋಣಿಕೊಪ್ಪ ಮುಖ್ಯ ರಸ್ತೆಯ ಹಾತೂರು ಬಳಿ ಮಳೆ ಗಾಳಿಯಿಂದ ಭಾರೀ ಗಾತ್ರದ ಮರ ಉರುಳಿ ಬಿದ್ದು ಸಂಚಾರಕ್ಕೆ ತೊಡಕುಂಟಾಗಿತ್ತಾದರು, ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಪೊನ್ನಂಪೇಟೆ ತಾಲ್ಲೂಕಿನ ಕಾನೂರು- ಕುಟ್ಟ ಮುಖ್ಯ ರಸ್ತೆಯಲ್ಲಿ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಗೋಣಿಕೊಪ್ಪ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸಮಸ್ಯೆಗೆ ತಕ್ಷಣ ಸ್ಪಂದಿಸಿ ಘಟನಾ ಸ್ಥಳಕ್ಕೆ ತೆರಳಿ ಮರ ತೆರವುಗೊಳಿಸಿದ್ದಾರೆ. ಶನಿವಾರಸಂತೆಯ ಮಾಲಂಬಿ ಸರ್ಕಾರಿ ಪ್ರಾಥಮಿಕ ಶಾಲೆಯ ಹೆಂಚುಗಳು ಭಾರೀ ಗಾಳಿ ಮಳೆಗೆ ಹಾರಿ ಹೋಗಿದೆ. ಶಾಲೆಗೆ ರಜೆ ಇದ್ದುದರಿಂದ ಅಪಾಯ ತಪ್ಪಿದೆ. ಹೆಚ್ಚಿನ ಮಳೆಯಿಂದ ಕುಶಾಲನಗರದ ಕೈಗಾರಿಕಾ ಬಡಾವಣೆಯಲ್ಲಿರುವ ಮುತ್ತಮ್ಮ ಶಿವಣ್ಣ ಎಂಬವರ ವಾಸದ ಮನೆಯ ಗೋಡೆ ಕುಸಿದು ಬಿದಿರುವ ಘಟನೆ ನಡೆದಿದೆ.
::: ಸೇತುವೆ ಕುಸಿಯುವ ಭೀತಿ :::
ಮಡಿಕೇರಿ ತಾಲ್ಲೂಕಿನ ಕಗ್ಗೊಡ್ಲುವಿನಿಂದ – ಬಿಳಿಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿರುವ ಮುಖ್ಯ ರಸ್ತೆಯ ಸೇತುವೆಯ ಪಾರ್ಶ್ವ ಭಾರೀ ಗಾಳಿ ಮಳೆಯಿಮದಾಗಿ ಕುಸಿಯುವ ಆತಂಕದಲ್ಲಿದ್ದು, ಸಂಬAಧ ಪಟ್ಟ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕಾಗಿ ಗ್ರಾಮಸ್ಥರು ಕೋರಿಕೊಂಡಿದ್ದಾರೆ. ವಿರಾಜಪೇಟೆ-ಗೋಣಿಕೊಪ್ಪ ಮುಖ್ಯ ರಸ್ತೆಯ ಹಾತೂರು ಬಳಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ತೆರವು ಕಾರ್ಯ ನಡೆಸಲಾಯಿತು. ಪೊನ್ನಂಪೇಟೆ ತಾಲೂಕಿನ ಕಾನೂರು- ಕುಟ್ಟ ಮುಖ್ಯ ರಸ್ತೆಯಲ್ಲಿ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು, ಈ ಸಂಬಂಧ ಗೋಣಿಕೊಪ್ಪ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಘಟನಾ ಸ್ಥಳಕ್ಕೆ ತೆರಳಿ ಮರ ತೆರವುಗೊಳಿಸಿದರು.
::: ಮಳೆ ವಿವರ :::
ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 78.80 ಮಿ.ಮೀ. ಮಳೆಯಾಗಿದ್ದು, ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 98.42 ಮಿ.ಮೀ. ಕಳೆದ ವರ್ಷ ಇದೇ ದಿನ 24.03 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1944.06 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1142.12 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 55.60 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 3.55 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1333.15 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 469.66 ಮಿ.ಮೀ. ಮಳೆಯಾಗಿತ್ತು. ಪೊನ್ನಂಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 90.05 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 4.08 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1289.08 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 404.41 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 110.05 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 12.55 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1265.61 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 503.56 ಮಿ.ಮೀ. ಮಳೆಯಾಗಿತ್ತು.
ಕುಶಾಲನಗರ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 39.90 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 6.30 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 895.60 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 454.65 ಮಿ.ಮೀ. ಮಳೆಯಾಗಿತ್ತು. ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ : ಮಡಿಕೇರಿ ಕಸಬಾ 102, ನಾಪೋಕ್ಲು 77.20, ಸಂಪಾಜೆ 64.50, ಭಾಗಮಂಡಲ 150, ವಿರಾಜಪೇಟೆ 61.20, ಅಮ್ಮತ್ತಿ 50, ಹುದಿಕೇರಿ 104.10, ಶ್ರೀಮಂಗಲ 121, ಪೊನ್ನಂಪೇಟೆ 85, ಬಾಳೆಲೆ 50.12, ಸೋಮವಾರಪೇಟೆ ಕಸಬಾ 108.20, ಶನಿವಾರಸಂತೆ 55, ಶಾಂತಳ್ಳಿ 234, ಕೊಡ್ಲಿಪೇಟೆ 43, ಕುಶಾಲನಗರ 19.80, ಸುಂಟಿಕೊಪ್ಪ 60 ಮಿ.ಮೀ.ಮಳೆಯಾಗಿದೆ.
::: ಹಾರಂಗಿಯಿಂದ ನದಿಗೆ 10000 ಕ್ಯುಸೆಕ್ ನೀರು :::
ಕೊಡಗು ಜಿಲ್ಲೆಯ ಹಲವೆಡೆ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ಜಲಾಶಯದಿಂದ 10000 ಕ್ಯುಸೆಕ್ ನೀರನ್ನು ನದಿಗೆ ಹರಿಯ ಬಿಡಲಾಗುತ್ತಿದ್ದು, ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 50 ಕ್ಯುಸೆಕ್ ಆಗಿತ್ತು. ಇಂದಿನ ನೀರಿನ ಒಳಹರಿವು 9257 ಕ್ಯುಸೆಕ್, ಕಳೆದ ವರ್ಷ ಇದೇ ದಿನ 2239 ಕ್ಯುಸೆಕ್ ಆಗಿತ್ತು. ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2852.56 ಅಡಿಗಳು. ಕಳೆದ ವರ್ಷ ಇದೇ ದಿನ 2844.67 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 21.60 ಮಿ.ಮೀ., ಕಳೆದ ವರ್ಷ ಇದೇ ದಿನ 5.20 ಮಿ.ಮೀ.