ಮಡಿಕೇರಿ ಜು.17 NEWS DESK : ವಾಹನ ಚಾಲಕರ ಸುರಕ್ಷತೆಯ ದೃಷ್ಟಿಯಿಂದ ಮತ್ತು ಸಂಚಾರಿ ನಿಯಮ ಉಲ್ಲಂಘನೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವಾಹನ ಮಾಲೀಕರ ಹಾಗೂ ಚಾಲಕರ ಹಿತದೃಷ್ಟಿಯಿಂದ ಪೊಲೀಸ್ ಅಧಿಕಾರಿಗಳು ಮಾಡಿರುವ ಮನವಿ ಹೀಗಿದೆ >>
ಚಾಲಕರು ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು, ನಾಲ್ಕು ಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿರಬೇಕು, ಯಾವುದೇ ರೀತಿಯ ವಾಹನ ಚಲಾಯಿಸುವ ಸಂದರ್ಭ ಮದ್ಯಪಾನ ಸೇವಿಸಿರಬಾರದು. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಕಾನೂನು ಬಾಹಿರವಾಗಿದ್ದು, ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ದಂಡಕ್ಕೆ ಗುರಿಪಡಿಸಲಾಗುವುದು. ಎಲ್ಲಾ ರೀತಿಯ ವಾಹನ ಚಾಲನಾ ಸಂದರ್ಭ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ. ರಾತ್ರಿ ವೇಳೆ ವಾಹನ ಸಂಚರಿಸುವ ಸಂದರ್ಭ ಎಲ್ಲಾ ಮಾದರಿಯ ವಾಹನಗಳು ಎಲ್‌ಇಡಿ ಲೈಟ್ ಬಳಕೆಯನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ. ದ್ವಿಚಕ್ರ ವಾಹನ ಚಾಲನೆ ಸಂದರ್ಭ ಚಾಲಕರು ಹಾಗೂ ಹಿಂಬದಿ ಸವಾರರು ಕಡ್ಡಾಯವಾಗಿ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಿರಬೇಕು. ಎಲ್ಲಾ ಮಾದರಿಯ ನಿಯಮ ಬಾಹಿರ ಸೈಲೆನ್ಸರ್ ಗಳನ್ನು ಸಂಪೂರ್ಣ ನಿಷೇದಿಸಲಾಗಿದೆ. ಮಕ್ಕಳ ಶಾಲಾ ವಾಹನಗಳು(ಆಟೋ ರಿಕ್ಷಾ ಸೇರಿದಂತೆ) ನಿಗಧಿ ಪಡಿಸಿದಷ್ಟೇ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ನಗರದಲ್ಲಿ ಗುರುತು ಮಾಡಿದ ಸ್ಥಳದಲ್ಲಿಯೇ ಸೂಚಿಸಿದ ಎಲ್ಲಾ ವಾಹನಗಳನ್ನು ನಿಲುಗಡೆಗೊಳಿಸಬೇಕು. (ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಪ್ರತ್ಯೇಕವಾಗಿ) ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಮಾಲೀಕ/ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ನೋಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುವ ವಾಹನಗಳ ಫೋಟೋವನ್ನು ಕರ್ತವ್ಯದಲ್ಲಿರುವ ಸಂಚಾರಿ ಪೊಲೀಸರು ಕ್ಲಿಕ್ ಮಾಡಿ ಠಾಣೆಗೆ ಕಳುಹಿಸುವುದರಿಂದ ನಿಯಮ ಉಲ್ಲಂಘನೆಯ ವಾಹನಗಳ ವಿರುದ್ಧ ದಂಡ ವಿಧಿಸಲಾಗುವುದು. ವಾಹನ ಮಾಲೀಕರು/ ಚಾಲಕರು ಸಂಚಾರಿ ನಿಯಮದ ಬಗ್ಗೆ ಜಾಗೃತಿ ವಹಿಸಬೇಕು. ವಾಹನ ವಿಮೆ, ಆರ್‌ಸಿ ಸೇರಿದಂತೆ ವಾಹನಗಳ ಎಲ್ಲಾ ದಾಖಲಾತಿಗಳನ್ನು ಸರಿಯಾದ ಸಮಯಕ್ಕೆ ನವೀಕರಿಸಿಕೊಳ್ಳಬೇಕು. ಎಲ್ಲಾ ರೀತಿಯ ವಾಹನದಲ್ಲಿ ನಿಗಧಿ ಪಡಿಸಿದ ಸಂಖ್ಯೆಯ ಜನರನ್ನು ಮಾತ್ರ ಕರೆದುಕೊಂಡು ಹೋಗಬೇಕು. ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸಿದರೆ ಅಪ್ರಾಪ್ತರನ್ನು ಮತ್ತು ಅವರ ಪೋಷಕರನ್ನು ಕಾನೂನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ತಿಳಿಸಿರುವ ಸಂಚಾರಿ ಠಾಣಾಧಿಕಾರಿಗಳು, ಸಂಚಾರಿ ನಿಯಮ ಪಾಲನೆಗೆ ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.










