ಸೋಮವಾರಪೇಟೆ ಜು.18 NEWS DESK : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಗಮನ ಹರಿಸಬೇಕು. ಫಲಾನುಭವಿಗಳಿಗೆ ಸರಕಾರದ ಯೋಜನೆಗಳನ್ನು ತಲುಪಿಸಲು ಅಧಿಕಾರಿಗಳು ಕ್ರಮವಹಿಸಬೇಕೆಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಂತರಾಜು ನಿರ್ದೇಶನ ನೀಡಿದರು.
ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಜನೆಯ ಅನುಷ್ಠಾನದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಶಕ್ತಿ ಯೋಜನೆಯಲ್ಲಿ 2023 ರಿಂದ ಇಲ್ಲಿಯ ವರೆಗೆ 60,77,137 ಮಹಿಳೆಯರು ಸಂಚರಿಸಿದ್ದು, ಸರ್ಕಾರದಿಂದ ಇಪ್ಪತ್ತನಾಲ್ಕು ಕೋಟಿ ಹದಿನಾಲ್ಕು ಲಕ್ಷದ ಒಂಬೈನೂರು ಹಣ ಸಂದಾಯವಾಗಿದೆ. ಜಿಲ್ಲೆಯಲ್ಲಿ ತಿಂಗಳಿಗೆ ಸರಾಸರಿ 16 ಸಾವಿರ ಮಹಿಳೆಯರು ಶಕ್ತಿ ಯೋಜನನೆಯಲ್ಲಿ ಸಂಚರಿಸಿದ್ದಾರೆ. ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕ ಮೆಹಬೂಬ ಹೇಳಿದರು.
ಬಸ್ ಚಾಲಕರು ಮಾರ್ಗದಲ್ಲಿ 5 ರಿಂದ 8 ಮಹಿಳಾ ಪ್ರಯಾಣಿಕರು ನಿಂತು ಬಸ್ ನಿಲುಗಡೆಗೆ ಪ್ರಯತ್ನಿಸಿದರು ಬಸ್ ನಿಲ್ಲಿಸುವುದಿಲ್ಲ ಎಂದು ಮಹಿಳೆಯರು ದೂರುತ್ತಿರುವ ಬಗ್ಗೆ ಸಮಿತಿ ಸದಸ್ಯ ಹಂಡ್ಲಿ ಗ್ರಾಮದ ನಾಗರಾಜು ಅಧಿಕಾರಿಯ ಗಮನಸೆಳೆದರು. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಗುವುದು.
23,119 ಬಿಪಿಎಲ್ ಕಾರ್ಡ್ ಫಲಾನುಭವಿಗಳಿದ್ದು, 22,767 ಕಾರ್ಡ್‍ದಾರರಿಗೆ ಹೆಚ್ಚುವರಿ ಅಕ್ಕಿ, ಹಣ ಸಂದಾಯವಾಗುತ್ತಿದೆ. ಕೆಲವರು ಈಕೆವೈಸಿ ಮಾಡಿಸದವರಿಗೆ ಹಣ ಬಂದಿರುವುದಿಲ್ಲ ಎಂದು ಆಹಾರ ನಿರೀಕ್ಷಕಿ ಯಶಸ್ವಿನಿ ಮಾಹಿತಿ ನೀಡಿದರು. ಕೆಲವು ನ್ಯಾಯ ಬೆಲೆ ಅಂಗಡಿಗಳು ತಮಗೆ ಅನುಕೂಲವಾದ ಸಮಯಕ್ಕೆ ಅಂಗಡಿ ತೆರೆದು ಅಕ್ಕಿ ವಿತರಣೆ ಮಾಡುತ್ತಿರುವುದರಿಂದ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಕೇಳಿದರೆ ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಕಾರ್ಮಿಕರಿಗೆ ಅನುಕೂಲವಾಗುವಂತೆ ವ್ಯವಹರಿಸುವಂತೆ ಸೂಚನೆ ನೀಡಬೇಕೆಂದು ಸದಸ್ಯರಾದ ಶೀಲಾ ಡಿಸೋಜ ಹೇಳಿದರು.
ಸೆಸ್ಕ್ ಇಲಾಖೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 28,364 ಜನರು ಹೆಸರನ್ನು ನೊಂದಾಯಿಸಿಕೊಂಡು ಸರ್ಕಾರದ ಲಾಭ ಪಡೆಯುತ್ತಿದ್ದಾರೆ. 2332 ಜನರು ಇಂದಿಗೂ ನೋಂದಾಯಿಸಿ ಕೊಂಡಿಲ್ಲ. ಕೆಲವು ಕಾಫಿ ತೋಟದ ಮಾಲೀಕರು ಲೈನ್ ಮನೆಯ ವಿದ್ಯುತ್ ಬಿಲ್ಲನ್ನು ತಾವೇ ಪಾವತಿಸುತ್ತಿದ್ದಾರೆ ಎಂದು ಇಲಾಖೆಯ ಅಧಿಕಾರಿ ಗುಣಶೇಖರ್ ಮಾಹಿತಿ ನೀಡಿದರು.
ಈ ಸಂದರ್ಭ ಸಮಿತಿ ಅಧ್ಯಕ್ಷ ಕಾಂತರಾಜ್ ಮಾತನಾಡಿ, ಮುಂದಿನ ಸಭೆಯನ್ನು ಇನ್ನೂ ವ್ಯವಸ್ಥಿತವಾಗಿ ನಡೆಸಬೇಕಿದೆ. ಜಿಲ್ಲೆಗೆ ಮಳೆಗಾಲದಲ್ಲಾದರೂ ಸೀಮೆಎಣ್ಣೆ ನೀಡುವಂತೆ ಸಭೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಿತು. ಇಲ್ಲಿ ಆದ ಎಲ್ಲ ನಿರ್ಣಯಗಳನ್ನು ಸರ್ಕಾರಕ್ಕೆ ಕಳಿಸಿಕೊಡಲಾಗುವುದು. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ತೆರಳಿ ಸಂಬಂಧಿಸಿದ ಸಚಿವರೊಂದಿಗೆ ಯೋಜನೆಗಳು ಕಟ್ಟುನಿಟ್ಟಾಗಿ ಅನುಷ್ಠಾನವಾಗುವಂತೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಪಿ.ವೀರಣ್ಣ ಮಾತನಾಡಿ, ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆ ಸರಿಯಾದ ರೀತಿಯಲ್ಲಿ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು. ಅದರಲ್ಲಿ ಯಾವುದೇ ಲೋಪದೋಷವಿದ್ದರೆ ಸಭೆಯಲ್ಲಿ ತಿಳಿಸುವುದರೊಂದಿಗೆ, ಸರ್ಕಾರದ ಯೋಜನೆಗಳು ಸರಿಯಾಗಿ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕೆಂದರು. ಸಭೆಯಲ್ಲಿ ಸಮಿತಿ ಸದಸ್ಯರು ಮತ್ತು ಸಂಬಂಧಿಸಿದ ಇಲಾಖಾಧಿಕಾರಿಗಳು ಇದ್ದರು.