ಕುಶಾಲನಗರ ಜು.26 NEWS DESK : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಮತ್ತು ಕುಶಾಲನಗರ ಸ್ಥಳೀಯ ಸಂಸ್ಥೆ, ಅತ್ತೂರು ಹಾರಂಗಿ ಜ್ಞಾನಗಂಗಾ ಶಾಲೆ ಹಾಗೂ ಕುಶಾಲನಗರ ಮಾಜಿ ಸೈನಿಕರ ಸಂಘದ ವತಿಯಿಂದ ಕುಶಾಲನಗರದ ಮುಳ್ಳುಸೋಗೆಯಲ್ಲಿರುವ ಮಾಜಿ ಸೈನಿಕರ ಸಂಘದ ಸಭಾಂಗಣದಲ್ಲಿ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಸೇವೆಯನ್ನು ಸ್ಮರಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜ್ಞಾನಗಂಗಾ ವಸತಿ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಎನ್.ಸಿ.ಸಿ.ಕೆಡೆಟ್ ಗಳು ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿ ನಿವೃತ್ತರಾಗಿರುವ ಸೈನಿಕರು ಮತ್ತು ಸಂಘದ ಮಾಜಿ ಸೈನಿಕರಿಗೆ ಪುಷ್ಪ ನೀಡಿ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಮಾಜಿ ಸೈನಿಕರು
ಕಾರ್ಗಿಲ್ ಯುದ್ಧದ ತಮ್ಮ ಅನುಭವವನ್ನು ಹಂಚಿಕೊಂಡರು.
ಅಧ್ಯಕ್ಷತೆ ವಹಿಸಿದ್ದರ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಪಿ.ಎ.ನಂಜುಂಡ ಮಾತನಾಡಿ, ಸೈನಿಕರು ಶಿಶ್ತು, ಸಮಯ ಪಾಲನೆ, ರಾಷ್ಟ್ರ ಪ್ರೇಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ, ರಾಷ್ಟ್ರಭಿಮಾನ ಇರುವ ಉದ್ದೇಶದಿಂದ ನಮ್ಮ ಸೈನಿಕರು ಎಂತಹ ಸಂಧಿಗ್ಧ ಪರಿಸ್ಥಿತಿಯ್ಲಲೂ ಗಡಿ ಕಾಯುವ ಮೂಲಕ ರಾಷ್ಟ್ರವನ್ನು ಶತ್ರುಗಳಿಂದ ಕಾಪಾಡುತ್ತಾರೆ ಎಂದರು.
1999ರಲ್ಲಿ ಪಾಕಿಸ್ತಾನ ನಮ್ಮ ದೇಶದೊಳಗೆ ಪ್ರವೇಶಿಸಿ ಕಾಲು ಕರೆದು ಜಗಳಕ್ಕೆ ಬಂದಿತ್ತು. 1999ರ ಜುಲೈ 26 ರಂದು ನಡೆದ ಕಾರ್ಗಿಲ್ ಕಾರ್ಯಾಚರಣೆಯಲ್ಲಿ ನಮ್ಯ ಸೈನಿಕರು ಪಾಕಿಸ್ತಾನದ ಸೈನಿಕರನ್ನು ಸದೆ ಬಡಿದ ಮೂಲಕ ಕಾರ್ಗಿಲ್ ಯುದ್ದ ಅಂತ್ಯಗೊಂಡಿತ್ತು ಹಾಗೂ ಕಾರ್ಗಿಲ್ ಕದನದಲ್ಲಿ ನಮ್ಮ ದೇಶದ ನೂರಾರು ಸೈನಿಕರು ವೀರ ಮರಣ ಹೊಂದಿದ್ದರು . ಕಾರ್ಗಿಲ್ ವಿಜಯೋತ್ಸವದಲ್ಲಿ ಪಾಲ್ಗೊಂಡ ಸೈನಿಕರು ಮತ್ತು ಯುದ್ದದಲ್ಲಿ ಮರಣ ಹೊಂದಿದ್ದ ಸೈನಿಕರ ನೆನಪಿಗಾಗಿ ರಾಷ್ಟ್ರದಲ್ಲಿ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಸ್ಕೌಟ್ಸ್, ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ನಮ್ಮ ಸೈನಿಕರು ಸದಾ ತಮ್ಮ ಜೀವವನ್ನು ತೆತ್ತು ದೇಶದ ರಕ್ಷಣೆಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಾರೆ. ನಾವು ನಮ್ಮ ಸೈನಿಕರ ತ್ಯಾಗ ಬಲಿದಾನವನ್ನು ಪ್ರತಿ ದಿನ ಸ್ಮರಿಸಬೇಕಾಗಿದೆ ಎಂದರು.
ವಿದ್ಯಾರ್ಥಿಗಳು ದೇಶದ ರಕ್ಷಣೆಗಾಗಿ ಶ್ರಮಿಸುವ ಸೈನಿಕರ ಸೇವೆ ಹಾಗೂ ರಾಷ್ಟ್ರ ರಕ್ಷಣೆ ಬಗ್ಗೆ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಸ್ಕೌಟ್ಸ್ ವಿಭಾಗದ ಆಯುಕ್ತ ಜಿಮ್ಮಿ ಸಿಕ್ವೇರಾ ಮಾತನಾಡಿ, ನಾವು ದೇಶದ ಬೆನ್ನೆಲುಬುಗಳಾದ ದೇಶದ ಗಡಿ ಕಾಯುವ ಸೈನಿಕರು ಹಾಗೂ ಸದಾ ಬೆವರು ಸುರಿಸಿ ಆಹಾರ ಬೆಳೆಯುವ ರೈತರ ಶ್ರಮವನ್ನು ಗೌರವಿಸಬೇಕು ಎಂದರು.
ಕಾರ್ಗಿಲ್ ಯುದ್ದದ ಅನುಭವಗಳನ್ನು ಸಭೆಗೆ ಮಂಡಿಸಿದ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಎಸ್.ಆರ್.ಮಾದಪ್ಪ , ಕಾರ್ಗಿಲ್ ಯುದ್ದದ ಸನ್ನಿವೇಶವು
ಭಾರತೀಯರ ಶೌರ್ಯ, ತ್ಯಾಗ, ಬಲಿದಾನ ಮತ್ತು ಪರಾಕ್ರಮವನ್ನು ಎತ್ತಿ ಹಿಡಿಯುವ ಮೂಲಕ ದೇಶದ ಭಾವೈಕ್ಯತೆಯನ್ನು ಪ್ರತಿಬಿಂಬಿಸಿತು ಎಂದರು.
ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ನಿವೃತ್ತ ಯೋಧ, ಕೂಡಿಗೆಯ ಪಿ.ಎ.ಮಹಮ್ಮದ್ ನಬಿ , ತಮ್ಮ ಕಾರ್ಗಿಲ್ ಯುದ್ದದ ಅನುಭವವನ್ನು ಹಂಚಿಕೊಂಡರು.
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ತಾವು ಎದುರಾಳಿ ದೇಶದ ಸೈನಿಕರೊಂದಿಗೆ ಹೋರಾಟ ಮಾಡಿ ಅನುಭವಿಸಿದ ಸನ್ನಿವೇಶಗಳನ್ನು ಅವರು ಮನಮುಟ್ಟುವಂತೆ ಚಿತ್ರಿಸಿದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿದರು.
ಗೈಡ್ಸ್ ಸಂಸ್ಥೆಯ ಆಯುಕ್ತೆ ಯೂ ಆದ ಪದ್ಮಶ್ರೀ ಪುರಸ್ಕೃತರಾದ ರಾಣಿ ಮಾಚಯ್ಯ, ಸಂಸ್ಥೆಯ ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ, ಜಿಲ್ಲಾ ತರಬೇತಿ ಆಯುಕ್ತ ಕೆ.ಯು.ರಂಜಿತ್, ಗೈಡ್ಸ್ ನ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನ, ಕುಶಾಲನಗರ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಎಂ.ಎಸ್.ಗಣೇಶ್,
ಮಾಜಿ ಸೈನಿಕರ ಸಂಘದ ಖಜಾಂಚಿ ಎನ್.ಎಸ್.ನರೇಶ್, ಹಿರಿಯ ನಿವೃತ್ತ ಯೋಧ ಕೆ.ಎನ್.ಭೋಜಪ್ಪ, ಗೈಡ್ಸ್ ನ ಶಿಕ್ಷಕಿಯರಾದ ಕೆ.ಟಿ.ಸೌಮ್ಯ, ಎಚ್.ಎಸ್.ರಶ್ಮಿ, ಜ್ಞಾನಗಂಗಾ ಶಾಲೆಯ ಗೈಡ್ಸ್ ಶಿಕ್ಷಕಿಯರಾದ ಭಾವನಾ, ಶ್ರೀಕಲಾ ಇತರರು ಇದ್ದರು.
ಸಂಸ್ಥೆಯ ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು, ಅತ್ತೂರು ಹಾರಂಗಿ ಜ್ಞಾನಗಂಗಾ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ವಯಂ ಸೇವಕರು, ಎನ್.ಸಿ.ಸಿ.ಕೆಡೆಟ್ ಗಳು
ಶಿಕ್ಷಕರು, ನಾಗರಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಕೌಟ್ಸ್, ಗೈಡ್ಸ್ ನ ವಿದ್ಯಾರ್ಥಿಗಳು ಹಾಗೂ ಎನ್.ಸಿ.ಸಿ.ಕೆಡೆಟ್ ಗಳು ರಾಷ್ಟ್ರ ಭಾವೈಕ್ಯತೆ ಪ್ರತಿಬಿಂಬಿಸುವ ಗೀತೆ ಹಾಡಿದರು.