ಮಡಿಕೇರಿ ಜು.27 NEWS DESK : ಕೊಡಗು ಜಿಲ್ಲೆಯ ವಿವಿಧೆಡೆ ಗಾಳಿ ಮಳೆಯ ಆರ್ಭಟ ಕಡಿಮೆಯಾಗಿದೆ. ಆದರೆ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು, ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದ ಮತ್ತು ಮನೆಗಳಿಗೆ ಹಾನಿಯಾದ ಘಟನೆ ಶನಿವಾರವೂ ಸಂಭವಿಸಿದೆ. ಪ್ರತ್ಯೇಕ ಘಟನೆಯಲ್ಲಿ ಸೋಮವಾರಪೇಟೆ ಪಟ್ಟಣದ ರೇಂಜರ್ ಬ್ಲಾಕ್ ವ್ಯಾಪ್ತಿಯ ಹರೀಶ್ ಹಾಗೂ ಬಿಳುಗುಂದ ಗ್ರಾಮದ ನಿವಾಸಿ ಕೆ.ಎಂ.ಕುಶಾಲಪ್ಪ ಅವರ ವಾಸದ ಮನೆಗೆ ಬೃಹತ್ ಮರ ಬಿದ್ದು ಹಾನಿಯಾಗಿದೆ. ಮಡಿಕೇರಿಯ ಬಿಳಿಗೇರಿ ಬಳಿ ಮೇಕೇರಿಯಿಂದ ಹಾಕತ್ತೂರು ಭಾಗದ ರಸ್ತೆ ಬದಿ ಕುಸಿದಿದೆ. ಮಡಿಕೇರಿ ತಾಲ್ಲೂಕಿನ ಹೊದ್ದೂರು ಬಳಿ ಮೂರ್ನಾಡು-ನಾಪೋಕ್ಲು ರಸ್ತೆಯಲ್ಲಿ, ವಿರಾಜಪೇಟೆ ಬೈಂದೂರು ರಸ್ತೆ, ಸೋಮವಾರಪೇಟೆ ತಾಲ್ಲೂಕಿನ ಹಾಲೇರಿ ಗ್ರಾಮದ ಬಳಿ ಬರೆ ಕುಸಿದಿದೆ. ಜೋಡುಪಾಲದ ಸಮೀಪದ ಮುಖ್ಯ ರಸ್ತೆಯ ಉದ್ದಮ ಮೊಟ್ಟೆಗೆ ತೆರಳುವ ಮಾರ್ಗದಲ್ಲಿ ಸೇತುವೆ, ಕಾಟಕೇರಿ-ಅಪ್ಪಂಗಳ ಮಾರ್ಗದಲ್ಲಿ, ಪೂಕಲ ಬಿರುನಾಣಿ ರಸ್ತೆಯಲ್ಲಿ ಮತ್ತು ಐಗೂರು ಹೊಸತೋಟದ ನಡುವೆ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಯಿತು. ಭಾರೀ ಗಾಳಿ ಮಳೆಯಿಂದಾಗಿ ಕರ್ಣಂಗೇರಿ ಗ್ರಾಮದ ಮೊಣಕಾಲ್ಮುರಿ ಶಾಲೆಯ ಹಿಂಭಾಗದ ಹೆಚ್.ಆರ್.ಹೇಮಾವತಿ ಎಂಬುವವರ ಮನೆ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಜಾನ್ಸನ್ ಪಿಂಟೋ ಹಾಗೂ ತಹಶೀಲ್ದಾರ್ ಪ್ರವೀಣ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಇದೇ ಸಂದರ್ಭ ಕುಟುಂಬದವರಿಗೆ ಆಹಾರ ಕಿಟ್ ವಿತರಿಸಲಾಯಿತು.
::: ಆಟೋಗೆ ಹಾನಿ :::
ರಸ್ತೆ ಬದಿಯಲ್ಲಿ ನಿಲ್ಲಿಸಿದ ಆಟೋ ಮೇಲೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾಮದಲ್ಲಿ ನಡೆದಿದೆ. ಜಯಪ್ಪ ಎಂಬುವರ ಆಟೋದ ಮೇಲೆ ವಿದ್ಯುತ್ ಕಂಬ ಬಿದ್ದಿದ್ದು, ಆಟೋ ಸಂಪೂರ್ಣ ಜಖಂ ಗೊಂಡಿದೆ. ವಿದ್ಯುತ್ ಇಲಾಖೆ ಆಟೋ ಚಾಲಕನಿಗೆ ಪರಿಹಾರ ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.
::: ಶಾಸಕರ ಭೇಟಿ :::
ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾದ ಬೇಳೂರು ಬಾಣೆ, ಸೂರ್ಲಬ್ಬಿ, ಜಂಬೂರು ಪುನರ್ವಸತಿ ಕೇಂದ್ರ, ಮಾದಾಪುರ, ಸೂರ್ಲಬ್ಬಿ ರಸ್ತೆ, ಶಾಂತಳ್ಳಿ ಗುಡ್ಡ ಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೂಕ್ತ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
::: ಜಾಕೆಟ್ ವಿತರಣೆ :::
ಭಾಗಮಂಡಲ ಹೋಬಳಿಯ ದೋಣಿಕಾಡು ಎಂಬಲ್ಲಿ ಕಾವೇರಿ ನದಿ ನೀರಿನ ಪ್ರವಾಹದ ರಕ್ಷಣೆಗೆ ದೋಣಿ ಸಹಾಯದಿಂದ ನದಿ ದಾಟುವ ಜನರಿಗೆ ಸುರಕ್ಷತೆಗಾಗಿ ಜಿಲ್ಲಾಡಳಿತದಿಂದ ಜೀವ ರಕ್ಷಕ ಜಾಕೆಟ್ ಗಳನ್ನು ವಿತರಿಸಲಾಯಿತು.