ಮಡಿಕೇರಿ ಜು.28 NEWS DESK : ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿವಿನಲ್ಲಿ ಮಾಧ್ಯಮ ಕ್ಷೇತ್ರದ ಪಾತ್ರ ಮಹತ್ತರ ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ಹಾಗೂ ವಿರಾಜಪೇಟೆಯ ಮಾಜಿ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಹಾಗೂ ಶೈಕ್ಷಣಿಕವಾಗಿ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಿಕಾರಂಗ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದೆ. ಪತ್ರಿಕಾ ರಂಗ ಉಳಿದರೆ ಪ್ರಜಾಪ್ರಭುತ್ವ ಸದೃಢವಾಗಿರುತ್ತದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಹಾದಿ ತಪ್ಪಿದರೆ ಅದನ್ನು ವಿಮರ್ಶೆಗೆ ಒಳಪಡಿಸಿ ಎಚ್ಚರಿಸಿ ಕಾವಲುಪಡೆಯಂತೆ ಮಾಧ್ಯಮ ಕ್ಷೇತ್ರ ಮುನ್ನಡೆಯುತ್ತಿದೆ. ಹಲವು ಹಗರಣ, ಅವ್ಯವಹಾರ, ಸಮಾಜದ್ರೋಹಿ ಚಟುವಟಿಕೆಗಳು ಪತ್ರಿಕೆ ಹಾಗೂ ವಾಹಿನಿಗಳಿಂದ ಹೊರಬರುತ್ತಿವೆ. ಕರ್ತವ್ಯ ನಿಷ್ಠರಾಗಿ, ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ಪ್ರತ್ರಕರ್ತರು ಸಮಾಜದ ಪ್ರತಿಬಿಂಬ ಎಂದು ಬಣ್ಣಿಸಿದ ಅವರು, ಇಂದಿನ ಕಾಲಘಟ್ಟದಲ್ಲಿ ಪತ್ರಿಕೆ ನಡೆಸುವುದು ಸವಾಲಿನ ಕೆಲಸವಾಗಿದೆ. ಇದರೊಂದಿಗೆ ಪತ್ರಿಕೆ ವಿತರಣೆ ಮಾಡುವುದು ಮತ್ತೊಂದು ಸಾಹಸದ ಕೆಲಸವಾಗಿ ಪರಿಣಮಿಸಿದೆ ಎಂದ ಅವರು, ಸಮಾಜಕ್ಕಾಗಿ ಶ್ರಮಿಸುವ ಪತ್ರಕರ್ತರಿಗೆ ದೊರಕಬೇಕಾದ ಸವಲತ್ತು ದೊರೆಯುತ್ತಿಲ್ಲ. ಪತ್ರಕರ್ತರಿಗೆ ಮನೆ ನಿರ್ಮಾಣ ಮಾಡಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಇಲ್ಲಿನ ಕಾನೂನು ತೊಡಕಿನಿಂದ ಜಾಗ ಒದಗಿಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮಕ್ಕಳು ಸತ್ಪ್ರಜೆಯಾಗಿ ರೂಪಿಸುವ ನಿಟ್ಟಿನಲ್ಲಿ ಅವರನ್ನು ಗುರುತಿಸಿ ಸನ್ಮಾನಿಸುವ ಕೆಲಸ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಭಾಷಣಗಾರರಾಗಿ ಆಗಮಿಸಿ ಮಾತನಾಡಿದ ಲಿಟಲ್ ಸ್ಕಾಲರ್ ಅಕಾಡೆಮಿ ಅಧ್ಯಕ್ಷೆ ಪೂಜಾ ರವೀಂದ್ರ, ಇಂದು ಪ್ರಪಂಚ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಬೆಳೆಯುತ್ತಿದೆ. ನಾಯಕತ್ವ ಗುಣದಿಂದ ಉನ್ನತ ಸ್ಥಾನಕ್ಕೆ ಏರುವ ಅವಕಾಶ ದೊರೆಯುತ್ತದೆ. ಆದರೆ, ನಾಯಕ ಹೇಗಾಬೇಕು ಎಂಬ ಗೊಂದಲ ಮಕ್ಕಳಲ್ಲಿದೆ. ಉತ್ತಮ ಸ್ನೇಹಿತರನ್ನು ಓಡನಾಡಿಗಳನ್ನಾಗಿ ಮಾಡಿಕೊಳ್ಳಬೇಕು ಇದರಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಿದೆ. ಇಂದು ನಾನಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಲು ವಿಪುಲ ಅವಕಾಶಗಳು ಸೃಷ್ಟಿಯಾಗಿವೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಮುಖ್ಯ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಮಂಗಳೂರು ಸಮಾಚಾರ ಪತ್ರಿಕೆ ಪ್ರಾರಂಭವಾದ ದಿನವನ್ನು ಪತ್ರಿಕಾ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಮಾಧ್ಯಮದಿಂದ ಸಮಾಜದಲ್ಲಿ ಒಳ್ಳೆಯ ಬದಲಾವಣೆ ತರಬಹುದು. ಪತ್ರಕರ್ತರು ಸಮಾಜಮುಖಿಯಾಗಿಯೂ ಕೆಲಸ ಮಾಡಬೇಕೆಂದ ಅವರು, ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ದೊಡ್ಡದಿದೆ. ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಬೇಕು. ಪಠ್ಯೇತರ ಚಟುವಟಿಕೆ ಬಗ್ಗೆ ಆಸಕ್ತಿ ಬೆಳಸಿ ಸಂಸ್ಕೃತಿ, ಕಲೆ ಅಭಿರುಚಿಯನ್ನು ಪ್ರೇರಪಿಸಬೇಕು. ಪುಸ್ತಕ, ಪತ್ರಿಕೆ ಓದುವ ಅಭ್ಯಾಸದಿಂದ ಜ್ಞಾನವೃದ್ಧಿಯಾಗುತ್ತದೆ. ಮಾಧ್ಯಮದ ಪ್ರಭಾವ ಸಮಾಜದ ಮೇಲೆ ಇಲ್ಲದಿದ್ದರೆ ವ್ಯವಸ್ಥೆ ಹಳ್ಳ ಹಿಡಿಯುತಿತ್ತು ಎಂದು ವ್ಯಾಖ್ಯಾನಿಸಿದರು. ಜಿ.ಪಂ. ಮಾಜಿ ಸದಸ್ಯ ಪಿ.ಎಂ. ಲತೀಫ್ ಸನ್ಮಾನ ಸ್ವೀಕರಿಸಿ ಮಾತನಾಡಿ, ವೈಯಕ್ತಿಕ ಬೆಳವಣಿಗೆಯೊಂದಿಗೆ ಸಾಮಾಜಿಕ ಸಮಸ್ಯೆಗಳ ಪರಿಹಾರದ ಬಗ್ಗೆಯೂ ನಾವೆಲ್ಲ ಚಿಂತನೆ ಹರಿಸಿದರೆ ಸದೃಢ ಸಮಾಜ ಕಟ್ಟಬಹುದು ಎಂದು ಅಭಿಮತ ವ್ಯಕ್ತಪಡಿಸಿದ ಅವರು, ಎಸ್.ಎಸ್.ಎಲ್.ಸಿ., ಪ್ರಥಮ ಹಾಗೂ ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನೆರವು ನೀಡುವ ಸಂಬಂಧ ಕಾರ್ಯಕ್ರಮ ರೂಪಿಸುತ್ತೇನೆ ಎಂದು ಘೋಷಿಸಿದರು.
ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪತ್ರಕರ್ತರು ಆರೋಗ್ಯದ ಬಗ್ಗೆ ನಿಗಾವಹಿಸಬೇಕು. ನಾವು ಚೆನ್ನಾಗಿದ್ದರೆ ಸಮಾಜವೂ ಉತ್ತಮವಾಗಿರುತ್ತದೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಮಕ್ಕಳನ್ನು ಸನ್ಮಾನಿಸುವ ಮೂಲಕ ಅವರಲ್ಲಿ ಮತ್ತಷ್ಟು ಸ್ಥೆöÊರ್ಯ ಹಾಗೂ ಸಾಧನೆ ಮಾಡುವ ಪ್ರೇರಪಣೆ ಈ ಕಾರ್ಯಕ್ರಮದ ಮೂಲಕ ಆಗಿದೆ ಎಂದು ಹೇಳಿದರು. ಕಾರ್ಯಕ್ರಮ ಸಂಚಾಲಕ ಟಿ.ಎನ್. ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
::: ಪ್ರತಿಭಾ ಪುರಸ್ಕಾರ :::
ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿ ಶೈಕ್ಷಣಿಕವಾಗಿ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಾದ ಆರ್. ಸಮರ್ಥ್, ಎನ್. ಸಾಗಾರಿಕ, ಆಯುಷ್ ಕುಟ್ಟಪ್ಪ, ಬೊಳ್ಳಜಿರ ದೇಚಮ್ಮ ಅಯ್ಯಪ್ಪ, ಬಾಚರಣಿಯಂಡ ಪರಿಧಿ ಪೊನ್ನಮ್ಮ, ಬಾಚರಣಿಯಂಡ ಶಶಾಂಕ್ ಸೋಮಯ್ಯ, ಎಸ್.ಆರ್.ಸಂಸ್ಕೃತಿ, ರಾಗ ಹೆಚ್. ಶೆಟ್ಟಿ, ವಿ.ಎ. ಚಿಂತನ್, ಎಂ.ಸಿ. ವಿಷ್ಣುವರ್ಧನ್, ಪಿ.ಸಿ. ಕಾಜಲ್, ಎ.ವಿ. ಸಮೃದ್ಧಿ, ಕೆ.ಎಸ್. ಅನನ್ಯ, ಕೆ.ಎಸ್. ದೀಕ್ಷಾ, ಕೆ.ಎಸ್. ಲಕ್ಷಿತಾ, ನಿವೇದ್ ಬಾಲಾಜಿ, ಎಸ್.ಪಿ.ಚಿತ್ತಾರ, ಎಸ್.ಪಿ.ಇಂಚರ, ತಿಷ್ಯಾ ಪೊನ್ನೇಟಿ, ರಸಜ್ಞ ಮಾದಪ್ಪ, ಎಂ.ರಕ್ಷನ್, ಎಂ.ಹಿಮಾನಿ, ಕೆ.ಈಶಾನ್ವಿ, ಕೆ.ಜೆ.ಮೋದಕ್ ಅವರುಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
::: ವಿತರಕರಿಗೆ ಸನ್ಮಾನ :::
ಕಳೆದ 50 ವರ್ಷಗಳಿಂದ ಪತ್ರಿಕಾ ವಿತರಕರಾಗಿ ಕೆಲಸ ಮಾಡುತ್ತಿರುವ ಸುಂಟಿಕೊಪ್ಪದ ಮುಕ್ಕಾಟೀರ ಎ ವಸಂತ್, 30 ವರ್ಷಗಳಿಂದ ಪತ್ರಿಕೆ ವಿತರಣೆ ಮಾಡುತ್ತಿರುವ ವೀರಾಜಪೇಟೆಯ ದೀಪಕ್ ದಾಸ್, 15 ವರ್ಷಗಳಿಂದ ಪತ್ರಿಕಾ ವಿತರಕರಾಗಿರುವ ಚೆಟ್ಟಳ್ಳಿಯ ಟಿ.ಎನ್.ಧನಲಕ್ಷ್ಮಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮೃದ್ಧಿ ವಾಸು ಪ್ರಾರ್ಥಿಸಿ, ಹೆಚ್.ಜೆ.ರಾಕೇಶ್ ಸ್ವಾಗತಿಸಿ, ಚನ್ನನಾಯಕ ನಿರೂಪಿಸಿ, ಶಿವರಾಜು ವಂದಿಸಿದರು.