ಮಡಿಕೇರಿ ಜು.29 : ಸರ್ವರ್ ಸಮಸ್ಯೆಗೆ ಪರಿಹಾರ ಸೂಚಿಸಬೇಕು, ಪಡಿತರ ವ್ಯವಸ್ಥೆಯನ್ನು ಸಮರ್ಪಕಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತ (ಮಾರ್ಕ್ಸ್ವಾದಿ) ಕಮ್ಯೂನಿಸ್ಟ್ ಪಕ್ಷ ನೆಲ್ಲಿಹುದಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನೆಲ್ಲಿಹುದಿಕೇರಿ ಗ್ರಾ.ಪಂ ಎದುರು ಜಮಾಯಿಸಿದ ಪಕ್ಷದ ಪ್ರಮುಖರು ಹಾಗೂ ಪದಾಧಿಕಾರಿಗಳು ಅವ್ಯವಸ್ಥೆಗಳ ವಿರುದ್ಧ ಘೋಷಣೆ ಕೂಗಿ, ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು. ಪಕ್ಷದ ಕಾರ್ಯದರ್ಶಿ ಪಿ.ಆರ್.ಭರತ್ ಮಾತನಾಡಿ, ಆರ್ಥಿಕವಾಗಿ ದುರ್ಬಲರಾಗಿರುವ ವರ್ಗಕ್ಕೆ ಸಹಾಯವಾಗಲೆಂದು ಪಡಿತರ ವ್ಯವಸ್ಥೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಈ ವ್ಯವಸ್ಥೆಯಲ್ಲಿ ಸುಮಾರು 14 ದಿನಸಿ ಸಾಮಾಗ್ರಿಗಳನ್ನು ನೀಡಲಾಗುತ್ತಿದ್ದು, ಬೇರೆ ರಾಜ್ಯಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿದೆ. ಆದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಒಬ್ಬರಿಗೆ ಕೇವಲ 5 ಕೆ.ಜಿ ಅಕ್ಕಿ ಮತ್ತು ಇನ್ನುಳಿದ 5 ಕೆ.ಜಿ ಅಕ್ಕಿಗೆ ಬದಲಾಗಿ 140 ರೂ.ಗಳನ್ನು ನಗದು ರೂಪದಲ್ಲಿ ನೀಡಲಾಗುತ್ತಿದೆ. ಉಳಿದ ಯಾವುದೇ ಸಾಮಾಗ್ರಿಗಳನ್ನು ನೀಡುತ್ತಿಲ್ಲ. ಚುನಾವಣೆ ಸಂದರ್ಭ ಮಾತ್ರ ಪೊಳ್ಳು ಭರವಸೆಗಳನ್ನು ನೀಡಲಾಗುತ್ತಿದೆ ಎಂದು ಟೀಕಿಸಿದರು. ಆರೋಗ್ಯ, ಉದ್ಯೋಗ ಮತ್ತಿತರ ಕ್ಷೇತ್ರಗಳ ಸರ್ಕಾರಿ ಸೌಕರ್ಯಗಳನ್ನು ಪಡೆಯಲು ಜನರಿಗೆ ಪಡಿತರ ಚೀಟಿ ಅಗತ್ಯವಾಗಿದೆ. ಆದರೆ ಪಡಿತರ ಚೀಟಿ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ನೆಲ್ಲಿಹುದಿಕೇರಿ ಭಾಗದಲ್ಲಿ ನಿತ್ಯ ಸರ್ವರ್ ಸಮಸ್ಯೆ ಕಾಡುತ್ತಿದೆ. ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಗಮನಹರಿಸಿ ಸರ್ವರ್ ಸಮಸ್ಯೆ ಬಗೆಹರಿಸಬೇಕು. ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರು ಹಾಗೂ ಬಡವರ ಸಂಖ್ಯೆ ಹೆಚ್ಚು ಇದ್ದು, ಬಿಪಿಎಲ್ ಪಡಿತರ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಬಿಪಿಎಲ್ ಕಾರ್ಡ್ನ ಮಾನದಂಡ ಬದಲಾಗಬೇಕು, ಎಲ್ಲಾ ಬಡ ಕೂಲಿ ಕಾರ್ಮಿಕರಿಗೂ ಬಿಪಿಎಲ್ ಕಾರ್ಡ್ ನೀಡಬೇಕು, ದಿನಸಿ ಸಾಮಾಗ್ರಿಗಳನ್ನು ಸಮರ್ಪಕವಾಗಿ ಒದಗಿಸಬೇಕು, ಶ್ರೀಮಂತರ ಬಳಿ ಇರುವ ಬಿಪಿಎಲ್ ಕಾರ್ಡ್ಗಳನ್ನು ವಶಕ್ಕೆ ಪಡೆಯಬೇಕು, ಬಿಪಿಎಲ್ ಕಾರ್ಡ್ದಾರರಿಗೆ ನಿಯಮಾನುಸಾರ ಇರುವ ಎಲ್ಲಾ ಆಹಾರ ಪದಾರ್ಥಗಳನ್ನು ನೀಡಬೇಕು ಎಂದು ಭರತ್ ಆಗ್ರಹಿಸಿದರು.
ಸರ್ಕಾರ ಮತ್ತು ಅಧಿಕಾರಿಗಳು ಬಡವರ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಪಕ್ಷದ ಪ್ರಮುಖರಾದ ಉದಯಕುಮಾರ್, ಅಭೀಬ್, ರವಿ, ರಘು, ಮುಸ್ತಫ, ಬೊಜಿ, ಲಲಿತ, ಚಂದ್ರ, ಕಾವೇರಿ, ರವಿ ಮತ್ತಿತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾಕಾರರು ಬೇಡಿಕೆಯ ಮನವಿ ಪತ್ರವನ್ನು ಕುಶಾಲನಗರ ಆಹಾರ ನಿರೀಕ್ಷಕರಾದ ಸ್ವಾತಿ ಅವರ ಮೂಲಕ ಆಹಾರ ಸಚಿವರು, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹಾಗೂ ನೆಲ್ಲಿಹುದಿಕೇರಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಂಜುAಡ ಸ್ವಾಮಿ ಅವರಿಗೆ ಸಲ್ಲಿಸಿದರು.