ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಕೊರವೇ ಅಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ, ವಯನಾಡುವಿನಲ್ಲಿ ಹೋಂಸ್ಟೇ ಮತ್ತು ರೆಸಾರ್ಟ್ಗಳಿದ್ದ ಗುಡ್ಡ ಕುಸಿದು ನೂರಾರು ಜನರೊಂದಿಗೆ ಅಮಾಯಕ ಪ್ರವಾಸಿಗರು ಕೂಡ ಮೃತಪಟ್ಟಿದ್ದಾರೆ. ಕೊಡಗು ಜಿಲ್ಲೆಯಲ್ಲೂ ಇದೇ ರೀತಿಯ ಅನಾಹುತ ಸಂಭವಿಸದಂತೆ ತಡೆಯಲು ಮಳೆಯ ತೀವ್ರತೆ ಕಡಿಮೆಯಾಗುವವರೆಗೆ ಪ್ರವಾಸಿಗರನ್ನು ನಿಷೇಧಿಸಬೇಕೆಂದು ಮನವಿ ಮಾಡಿದರು. ಪ್ರಸಿದ್ಧ ಪ್ರವಾಸಿತಾಣ ವಯನಾಡುವಿನಲ್ಲಿ ಧಾರಾಕಾರ ಮಳೆಯಿಂದ ಭೀಕರ ಭೂಕುಸಿತವಾಗಿ ಸ್ಥಳೀಯರೊಂದಿಗೆ ಪ್ರವಾಸಿಗರು ಕೂಡ ಸಾವನ್ನಪ್ಪಿದ್ದಾರೆ ಮತ್ತು ಕಣ್ಮರೆಯಾಗಿದ್ದಾರೆ. ಇದು ಕೇರಳದ ಪಕ್ಕದಲ್ಲೇ ಇರುವ ಕೊಡಗು ಜಿಲ್ಲೆಗೆ ಎಚ್ಚರಿಕೆಯ ಗಂಟೆಯಾಗಿದೆ. ದೇಶದ ಹೆಸರುವಾಸಿ ಪ್ರವಾಸಿತಾಣಗಳ ಪಟ್ಟಿಯಲ್ಲಿರುವ ಕೊಡಗಿನ ಬೆಟ್ಟಗುಡ್ಡಗಳ ಬಹುತೇಕ ಸ್ಥಳಗಳಲ್ಲಿ ರೆಸಾರ್ಟ್ ಮತ್ತು ಹೋಂಸ್ಟೇಗಳು ನಿರ್ಮಾಣಗೊಂಡಿವೆ. 2018ರಲ್ಲಿ ಕೊಡಗು ಕೂಡ ಭೂಕುಸಿತಕ್ಕೆ ಒಳಗಾಗಿದ್ದು, ಬಹಳಷ್ಟು ಅಮೂಲ್ಯ ಪ್ರಾಣಗಳು ಅಗಲಿವೆ.
ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮುಂದಿನ 7 ದಿನಗಳವರೆಗೆ ಕೊಡಗು ಜಿಲ್ಲೆಗೆ ಪ್ರವಾಸಿಗರ ಆಗಮನವನ್ನು ನಿಷೇಧಿಸಬೇಕು ಎಂದು ಪವನ್ ಪೆಮ್ಮಯ್ಯ ಮನವಿ ಮಾಡಿದರು. ಮಹಾಮಳೆಯಿಂದ ಮುಂಬರುವ ದಿನಗಳಲ್ಲಿ ಅನಾಹುತಗಳು ಸಂಭವಿಸಿದರೆ ಜಿಲ್ಲಾಡಳಿತಕ್ಕೆ ಕೊಡಗು ರಕ್ಷಣಾ ವೇದಿಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು. ಮನವಿ ಸಲ್ಲಿಸುವ ಸಂದರ್ಭ ಕೊರವೇ ನಿರ್ದೇಶಕ ಎಂ.ವೈ.ಸುಲೈಮಾನ್ ಹಾಗೂ ವರ್ಗೀಸ್ ಹಾಜರಿದ್ದರು.