ಮಡಿಕೇರಿ NEWS DESK ಆ.1 : ಅಧಿಕ ಮಳೆಯಿಂದ ಕೊಡಗು ಜಿಲ್ಲೆ ನಲುಗಿ ಹೋಗಿರುವ ಹಂತದಲ್ಲೇ ಕಿಡಿಗೇಡಿಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದು, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಡವಾಮೆರ ಕೊಂಡಾಟ ಸಂಘಟನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದೆ. ಕೊಡಗು ಅತವೃಷ್ಟಿಯಿಂದ ತತ್ತರಿಸಿ ಹೋಗಿದ್ದು, ಶಾಲಾಕಾಲೇಜುಗಳಿಗೆ ಬರುವ ಮಕ್ಕಳಿಗೆ ತೊಂದರೆಯಾಗಬಹುದೆಂದು ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಪರಿಸ್ಥಿತಿಗನುಗುಣವಾಗಿ ರಜೆ ಘೋಷಿಸುತ್ತಿದೆ. ರಜೆ ಕುರಿತು ಜಿಲ್ಲಾಡಳಿತದಿಂದ ಬಿಡುಗಡೆಯಾಗುವ ಮಾಹಿತಿಗಾಗಿ ಪೋಷಕರು ಹಾಗೂ ವಿದ್ಯಾರ್ಥಿಗಳು ಕಾದು ಕುಳಿತಿರುತ್ತಾರೆ. ಆದರೆ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಸಹಿ ಮತ್ತು ಮೊಹರನ್ನು ನಕಲಿ ಮಾಡಿದ್ದಾರೆ, ಅಸಲಿ ಯಾವುದು, ನಕಲಿ ಯಾವುದು ಎನ್ನುವ ಬಗ್ಗೆ ಜನ ಗೊಂದಲ ಮತ್ತು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಈ ರೀತಿಯ ಆತಂಕಕಾರಿ ಬೆಳವಣಿಗೆ ನಡೆಯದಂತೆ ಎಚ್ಚರಿಕೆಯ ಸಂದೇಶ ರವಾನಿಸಬೇಕೆಂದು ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ಬೆಳ್ಯಪ್ಪ ಅವರ ನಿರ್ದೇಶನದ ಮೇರೆಗೆ, ಸಂಘಟನಾ ಕಾರ್ಯದರ್ಶಿ ತೀತಿಮಾಡ ಸೋಮಣ್ಣ ಅವರು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರಿಗೆ ದೂರು ಸಲ್ಲಿಸಿದರು.