ಸೋಮವಾರಪೇಟೆ NEWS DESK ಆ.2 : ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಮತ್ತು ಶನಿವಾರಸಂತೆ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಮಳೆಹಾನಿ ಜಾಗಗಳಿಗೆ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ಶಾಸಕ ಅಶ್ವಥ್ ನಾರಾಯಣ ಗೌಡ ಭೇಟಿ ನೀಡಿ ಪರಿಶೀಲಿಸಿದರು. ಅತೀ ಹೆಚ್ಚು ಮಳೆಯಾಗಿರುವ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಗುಡ್ಡ ಕುಸಿತ, ಮನೆ ಕುಸಿತ, ಕೊಳೆರೋಗಕ್ಕೆ ತುತ್ತಾಗಿರುವ ಕಾಫಿ ತೋಟವನ್ನು ಪರಿಶೀಲಿಸಿ, ಹಾನಿಗೀಡಾಗಿರುವ ಮನೆಗಳನ್ನು ವೀಕ್ಷಿಸಿ, ಮಾಜಿ ಸಚಿವ ಅಪ್ಪಚ್ಚು ರಂಜನ್ ಅವರ ಮೂಲಕ ಅಗತ್ಯ ದಿನಸಿ ಸಾಮಾಗ್ರಿಗಳನ್ನು ವಿತರಿಸಿದರು.
ಶಾಂತಳ್ಳಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಜೇಡಿಗುಂಡಿಯಲ್ಲಿ ಗುಡ್ಡ ಕುಸಿತ, ಬಸವನಕಟ್ಟೆ, ನಗರಳ್ಳಿಯಲ್ಲಿ ಕಾಫಿ ತೋಟವನ್ನು ವೀಕ್ಷಿಸಿದರು. ಮಳೆ-ಗಾಳಿಗೆ ಕಾಫಿ ತೋಟದಲ್ಲಿ ಭಾರೀ ಪ್ರಮಾಣದ ನಷ್ಟವಾಗಿದ್ದು, ಮರಗಳು ಬಿದ್ದು ಕಾಫಿ ಗಿಡಗಳು ಮುರಿದಿರುವುದು ಒಂದೆಡೆಯಾದರೆ, ಅತಿಯಾದ ಮಳೆಗೆ ಕೊಳೆರೋಗ ಬಂದು ಕಾಫಿ ಕಾಯಿಗಳು ನೆಲಕ್ಕೆ ಬಿದ್ದಿರುವದರಿಂದ ಫಸಲು ನಷ್ಟ ಅನುಭವಿಸಬೇಕಾಗಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದು ತಕ್ಷಣ ಪರಿಹಾರ ಒದಗಿಸಲು ಕ್ರಮ ವಹಿಸುವಂತೆ ಸ್ಥಳೀಯ ಕೃಷಿಕರು, ಶಾಸಕರಲ್ಲಿ ಮನವಿ ಮಾಡಿದರು. ಜಿಲ್ಲೆಯಲ್ಲಿ ಆಗಿರುವ ಹಾನಿ ಬಗ್ಗೆ ಖುದ್ದು ವೀಕ್ಷಣೆ ಮಾಡಲಾಗಿದೆ. ಕಳೆದ ಅವಧಿಗಳಲ್ಲಿ ಮಳೆಹಾನಿಯಾದಾಗ, ಬಿಜೆಪಿ ಸರ್ಕಾರ ಹಾಗು ಕೊಡಗಿನಲ್ಲಿ ಈರ್ವರು ಬಿಜೆಪಿ ಶಾಸಕರಿದ್ದ ಸಂದರ್ಭ ತಕ್ಷಣ ಪರಿಹಾರ ಒದಗಿಸಲಾಗಿತ್ತು. ಸಂತ್ರಸ್ಥರಿಗೆ ಸೂಕ್ತ ಸ್ಪಂದನೆ ನೀಡಲಾಗಿತ್ತು. ಈಗಿನ ಸರ್ಕಾರ ತುರ್ತು ಪರಿಹಾರ ನೀಡಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆದು ತಕ್ಷಣ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಒತ್ತಾಯಿಸಲಾಗುವುದು ಎಂದು ಅಶ್ವಥ್ ನಾರಾಯಣ್ ತಿಳಿಸಿದರು. ಈ ಸಂದರ್ಭ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ತಾಲೂಕು ಅಧ್ಯಕ್ಷ ಗೌತಮ್, ಮಾಜಿ ಎಂ.ಎಲ್.ಸಿ. ಮೇದಪ್ಪ ಮತ್ತಿತರರು ಇದ್ದರು.