ಮಡಿಕೇರಿ NEWS DESK ಆ.2 : ಕೊಡಗು ಜಿಲ್ಲೆಯಲ್ಲಿ 2018-19 ನೇ ಸಾಲಿನಲ್ಲಿ ನಡೆದ ಪ್ರಾಕೃತಿಕ ವಿಕೋಪ ಸೇರಿದಂತೆ ಕೊರೋನ ಸಂಕಷ್ಟಗಳ ನಡುವೆಯೂ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿರುವ ಜಿಲ್ಲೆಯ ಗುತ್ತಿಗೆದಾರರಿಗೆ ವಿವಿಧ ಇಲಾಖೆಗಳಿಂದ ಒಟ್ಟು 165.84 ಕೋಟಿ ಗುತ್ತಿಗೆ ಹಣ ಪಾವತಿಗೆ ಬಾಕಿ ಇದೆ ಎಂದು ಮಡಿಕೇರಿ ತಾಲ್ಲೂಕು PWD ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಜೀವ ಲೋಚನ ಬಿ.ಪಿ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ಬಾರಿ ಸರ್ಕಾರ, ಸಂಬಂಧಪಟ್ಟ ಶಾಸಕರು, ಸಂಸದರಿಗೆ, ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿದರು ಬಾಕಿ ಮೊತ್ತ ಪಾವತಿಗೆ ಸಂಬಂಧಿಸಿದಂತೆ ಸೂಕ್ತ ಸ್ಪಂದನ ದೊರಕಿಲ್ಲ. ಇದರಿಂದ ಜಿಲ್ಲಾ ವ್ಯಾಪ್ತಿಯ ನೂರಕ್ಕೂ ಹೆಚ್ಚಿನ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದಿನ ಆ.15ರ ಒಳಗಾಗಿ ಬಾಕಿ ಮೊತ್ತದ ಪಾವತಿಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ‘ಅಹೋ ರಾತ್ರಿ ಪ್ರತಿಭಟನೆ’ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಸಂಕಷ್ಟದ ಸಂದರ್ಭಗಳಲ್ಲಿ ಜಿಲ್ಲೆಗೆ ಗುತ್ತಿಗೆದಾರರು ಅಗತ್ಯ ಕಾಮಗಾರಿಗಳನ್ನು ಸಾಲಮಾಡಿ ನಿರ್ವಹಿಸಿದ್ದಾರೆ. ಇಂದು ತಾವು ಮಾಡಿರುವ ಕೆಲಸಕ್ಕೆ ಸಂಬಂಧಿಸಿದ ಹಣವನ್ನು ಸಂಬಂಧಪಟ್ಟ ಇಲಾಖೆಗಳು ಪಾವತಿಸದ ಹಿನ್ನೆಲೆ ಹಲವು ಗುತ್ತಿಗೆದಾರರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಆರ್ಥಿಕ ನಷ್ಟದಿಂದ ಗುತ್ತಿಗೆದಾರರು ತೊಂದರೆಗೆ ಒಳಗಾದಲ್ಲಿ ಅದಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಲೋಕೋಪಯೋಗಿ ಇಲಾಖೆಯ ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿ 131.39 ಕೋಟಿ ಹಣ ಪಾವತಿಗೆ ಬಾಕಿ ಇದ್ದರೆ, ಕೊಡಗು ಜಿಲ್ಲಾ ಪಂಚಾಯತ್‌ನಿಂದ 18.90 ಕೋಟಿ, 2022-23ರ ಟಾಸ್ಕ್ ಫೋರ್ಸ್ನಡಿ ನಡೆದ ಕಾಮಗಾರಿಗಳಿಗೆ ಸಂಬಂಧಿಸಿದಂತೆ 2.74 ಕೋಟಿ, 2023-24 ನೇ ಸಾಲಿನ ಟಾಸ್ಕ್ ಫೋರ್ಸ್ ನಡಿ ಕಾಮಗಾರಿಗಳಿಗೆ 2.26 ಕೋಟಿ ಹೀಗೆ ವಿವಿಧ ಬಾಪ್ತುಗಳಲ್ಲಿ ಗುತ್ತಿಗೆದಾರರಿಗೆ ಸಾಕಷ್ಟು ಪ್ರಮಾಣದ ಬಿಲ್ ಹಣ ಪಾವತಿಗೆ ಬಾಕಿ ಇರುವುದಾಗಿ ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಆರ್.ರವಿಕುಮಾರ್ ಮಾತನಾಡಿ, ಪ್ರಾಕೃತಿಕ ವಿಕೋಪ ಸೇರಿದಂತೆ ಕೊರೋನ ಅವಧಿಯಲ್ಲಿ ಜಿಲ್ಲಾಧಿಕಾರಿಗಳಿಂದ ಮಂಜೂರಾದ, ಕ್ರಿಯಾಯೋಜನೆ ಆದ ಕಾಮಗಾರಿಗಳಿಗೂ ಹಣ ಬಿಡುಗಡೆಯಾಗಿಲ್ಲ. ಈ ಬಗ್ಗೆ ಈಗಿನ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದಾಗ ಸೂಕ್ತ ಸ್ಪಂದನ ದೊರಕಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸೋಮವಾರಪೇಟೆ ತಾಲ್ಲೂಕು ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ವಿನೋದ್ ಎನ್.ಈ., ಮಡಿಕೇರಿ ತಾಲ್ಲೂಕು ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಕೆ.ಬಿ.ಪೂಣಚ್ಚ, ಖಜಾಂಚಿ ರವೀಂದ್ರ ರೈ ಹಾಗೂ ಉಪಾಧ್ಯಕ್ಷ ಸದಾಶಿವ ರೈ ಉಪಸ್ಥಿತರಿದ್ದರು.