ಸುಂಟಿಕೊಪ್ಪ ಆ.5 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಸಂಸ್ಥೆ ಹಾಗೂ ಸ್ಪಷ್ಟ ದೃಷ್ಟಿ ಪ್ರಕಾರ ಭವಿಷ್ಯ ಸಂಸ್ಥೆಯ ಸಹಯೋಗದಲ್ಲಿ ಸುಂಟಿಕೊಪ್ಪದ ಮಂಜಿಕೆರೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.
ಮಂಜಿಕೆರೆ ಸಮುದಾಯ ಭವನದಲ್ಲಿ ನಡೆದ ಶಿಬಿರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಸಂಸ್ಥೆಯ ಮೇಲ್ವಿಚಾರಕಿ ಸಮನ್ವಯಾಧಿಕಾರಿ ಮಾಲಿನಿ ಉದ್ಘಾಟಿಸಿದರು.
ಸ್ಪಷ್ಟ ದೃಷ್ಟಿ ಪ್ರಕಾರ ಭವಿಷ್ಯ ಸಂಸ್ಥೆಯ ಮುಖ್ಯಸ್ಥ ಜಲೀಲ್ ಮಾತನಾಡಿ, ಮಾನವನ ದೇಹದ ಅಂಗಗಳಲ್ಲಿ ಕಣ್ಣು ಮಹತ್ವದಾಗಿದೆ. ಆದ್ದರಿಂದ ಕಾಲ ಕಾಲಕ್ಕೆ ಕಣ್ಣಿನ ಪರೀಕ್ಷೆಯನ್ನು ನಡೆಸುವ ಮೂಲಕ ದೃಷ್ಟಿದೋಷವನ್ನು ನಿವಾರಿಸಿಕೊಳ್ಳಬೇಕು ಎಂದರು.
ವೈದ್ಯರಿಂದ ಕಣ್ಣಿನ ದೃಷ್ಟಿಯ ಬಗ್ಗೆ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವುದು ಸೂಕ್ತ. ವ್ಯಕ್ತಿ ಲವ ಲವಿಕೆಯಿಂದ ಇರಬೇಕಾದರೆ ಸ್ವಚ್ಛಂದವಾಗಿ ತಮ್ಮ ಕಾರ್ಯವನ್ನು ತಾವೇ ಕಾರ್ಯನಿರ್ವಹಿಸಬೇಕಾದರೆ, ಕಣ್ಣು ದೃಷ್ಟಿ ಅವಶ್ಯಕವಾಗಿರುತ್ತದೆ. ಪ್ರತಿಯೊಬ್ಬರು ಕಣ್ಣಿನ ಬಗ್ಗೆ ನಿರಾಸಕ್ತಿ ತೋರಬಾರದೆಂದು ಅವರು ಕಿವಿಮಾತು ಹೇಳಿದರು.
125ಕ್ಕೂ ಹೆಚ್ಚಿನ ಮಂದಿ ಶಿಬಿರವನ್ನು ಸದುಪಯೋಗ ಪಡಿಸಿಕೊಂಡರು. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಸೇವಾ ಪ್ರತಿನಿಧಿ ಯಶೋಧ ಬಸವರಾಜ್, ಒಕ್ಕೂಟದ ಕಾರ್ಯದರ್ಶಿ ಮುತ್ತು, ಸ್ಪಷ್ಟ ದೃಷ್ಟಿ ಪ್ರಕಾರ ಭವಿಷ್ಯ ಸಂಸ್ಥೆಯ ಸಿಬ್ಬಂದಿಗಳು ಇದ್ದರು.