ಕೊಡ್ಲಿಪೇಟೆ ಆ.8 NEWS DESK : ಸಮಾಜದಲ್ಲಿ ಇಂದು ನಡೆಯುತ್ತಿರುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ತಲ್ಲಣಗಳಿಗೆ ವಚನ ಸಾಹಿತ್ಯ ದಿವ್ಯ ಔಷಧಿಯಾಗಿದೆ. ನಾಡಿನ ಸಂಸ್ಕೃತಿಗಳ ಅಧಃಪತನಕ್ಕೆ ಅನಕ್ಷರಸ್ಥರಿಗಿಂತ ಅಕ್ಷರಸ್ಥರ ಬೇಜವಬ್ದಾರಿಯ ವರ್ತನೆಗಳೇ ಕಾರಣ ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮದ್ ವಿಷಾದಿಸಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಕೊಡ್ಲಿಪೇಟೆಯಲ್ಲಿನ ಡಾ.ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಗುರು ಪಂಚಾಕ್ಷರ ಶಿವಾಚಾರ್ಯರ ದತ್ತಿ “ಶರಣ ಸಂಸ್ಕೃತಿ ಪ್ರಸಾರ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದಲ್ಲಿಂದು ಘಟಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಹನ್ನೆರಡನೇ ಶತಮಾನದ ವಚನಕಾರರು ನೀಡಿದ ಸಾಮಾಜಿಕ ಸಂದೇಶಗಳು ಪರಿಹಾರವಾಗಿವೆ. ಬಸವೇಶ್ವರರಾದಿಯಾಗಿ ವಚನಕಾರರು ನಡೆ ನುಡಿಗಳೆರಡನ್ನು ಒಂದಾಗಿಸಿ ಕಾಯಕವೇ ಕೈಲಾಸ, ಎನಗಿಂತ ಕಿರಿಯರಿಲ್ಲ. ಶಿವ ಶರಶರಣರಿಗಿಂತ ಹಿರಿಯರಿಲ್ಲ ಲೋಕದ ಡೊಂಕನ್ನು ನೀವೇಕೆ ತಿದ್ದುವಿರಿ.. ನಿಮ್ಮನ್ನು ನೀವು ತಿದ್ದಿಕೊಂಡು ನೋಡಿ. ಸಮಾಜವೇ ಬದಲಾಗಿರುತ್ತದೆ ಎಂದು ಸಾರಿದರು. ಕಲಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ಮತ್ತೊಂದು ವಚನವೊಂದರ ಸಾರ ಸಾಕು. ಮನುಷ್ಯ ಎಲ್ಲರೊಳಗೆ ಒಂದಾಗಿ ಶಾಂತಿ, ಸಮಧಾನ, ಸಹಬಾಳ್ವೆಯ ಬದುಕು ಕಟ್ಟಲು. ಆದರೆ ಆಗುತ್ತಿರುವುದೇನು ಅಂತರಂಗವನ್ನು ಕೊಳಕು ಮಾಡಿಕೊಂಡು ಬಹಿರಂಗದ ನಾಟಕ ವಾಡುತ್ತಿದ್ದೇವೆ ಎಂದು ಜಮೀರ್ ಅಹಮದ್ ನುಡಿದರು. ಇಂದಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ತಲ್ಲಣಗಳಿಗೆ ವಚನ ಸಾಹಿತ್ಯದ ಅರಿವು ಮೂಲ ಮಂತ್ರವಾಗಿದೆ ಎಂದು ಜಮೀರ್ ಅಹಮದ್ ಬಣ್ಣಿಸಿದರು. ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆಯ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿ, ಸಮಸಮಾಜ ನಿರ್ಮಾಣಕ್ಕೆ ಹನ್ನೆರಡನೇ ಶತಮಾನದಲ್ಲಿನ ಶರಣರ ಪರಂಪರೆ ನಾಡಿಗೆ ನೀಡಿರುವ ಕೊಡುಗೆ ಅಪಾರವಾದುದು ಎಂದರು. ಬಸವೇಶ್ವರರು 900 ವರ್ಷಗಳ ಹಿಂದೆಯೇ ಅನುಭವ ಮಂಟಪವನ್ನು ತೆರೆಯುವ ಮೂಲಕ ಎಲ್ಲಾ ಜಾತಿ ಹಾಗೂ ಧರ್ಮಗಳ ಶರಣರನ್ನು ಇವನಾರವ ಎನ್ನದೇ ಇವ ನಮ್ಮವನೆಂದು ಪುರಸ್ಕರಿಸಿ ಸಮಾನತೆ ತಂದರು. ಮಾನವ ಹಕ್ಕುಗಳ ಆಯೋಗವನ್ನು ಸರ್ಕಾರಗಳು ಇತ್ತೀಚೆಗೆ ರಚಿಸಿವೆ. ಆದರೆ ಬಸವಣ್ಣ ಅವನ ಕಾಲಾವಧಿಯಲ್ಲಿಯೇ ಸಮಾಜದಲ್ಲಿನ ನೊಂದು, ಬೆಂದ ಕಡು ಬಡ ಜನರಿಗೆ ಸಮನಾದ ನ್ಯಾಯ ನೀಡುತ್ತಿದ್ದರು ಎಂದು ಶ್ರೀಗಳು ಹೇಳಿದರು. ಇಂದು ವಿದ್ಯಾರ್ಥಿ ಹಂತದಲ್ಲಿಯೇ ಮಕ್ಕಳಿಗೆ ಸಂಸ್ಕಾರ ಹಾಗೂ ಶರಣರ ವಿಚಾರಧಾರೆಗಳ ಅರಿವು ಮೂಡಿಸಿದಲ್ಲಿ ಭವಿಷ್ಯದಲ್ಲಿ ಉತ್ತಮ ಸಮಾಜವನ್ನು ಕಾಣಲು ಸಾಧ್ಯ ಎಂದರು. ಶರಣ ಸಂಸ್ಕೃತಿ ಪ್ರಸಾರ ಕಾರ್ಯಕ್ರಮದಿಂದ ಪ್ರಭಾವಿತರಾದ ಸಂಸ್ಥೆಯ ಪ್ರಾಂಶುಪಾಲ ಮಹೇಶ್ ಮಾತನಾಡಿ, ಇನ್ನು ಮುಂದೆ ಸಂಸ್ಥೆಯ ವಿದ್ಯಾರ್ಥಿಗಳಿಗೆ ನಿತ್ಯವೂ ವಚನಗಳ ಅರಿವು ಮೂಡಿಸಿ ಕಲಿಸಲಾಗುವುದು ಎಂದರು. ಕೊಡ್ಲಿಪೇಟೆಯ ಶ್ರೀ ಶಿವಕುಮಾರ ಸ್ವಾಮೀಜಿ ವಿದ್ಯಾಸಂಸ್ಥೆಯ ನಿರ್ದೇಶಕ ಹೆಚ್.ಎಂ.ದಿವಾಕರ್ ಮಾತನಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಉಪನ್ಯಾಸಕರಾದ ಡಿ.ಪಿ.ಸತೀಶ್ ಇದ್ದರು. ಸಂಸ್ಥೆಯ ಅನುಷಾ ಹಾಗೂ ಅಮೀನಾ ತಂಡದಿಂದ ವಚನಗಾಯನ ನಡೆಯಿತು. ವಿದ್ಯಾರ್ಥಿನಿ ಅಲೀಮಾ ಸ್ವಾಗತಿಸಿದರು. ಯಶಸ್ವಿನಿ ವಂದಿಸಿದರು. ಸತೀಶ್ ನಿರೂಪಿಸಿದರು.