ಮಡಿಕೇರಿ ಆ.10 NEWS DESK : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ವಿಭಾಗ ಶಿಶಿಕ್ಷು ಅಧಿನಿಯಮ 1961 ರನ್ವಯ ಪೂರ್ಣ ಅವಧಿಯ ತಾಂತ್ರಿಕ ವೃತ್ತಿಯಲ್ಲಿ ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ವಿಭಾಗದಿಂದ ಶಿಶಿಕ್ಷು ವೃತ್ತಿಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಐಟಿಐ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಮೆಕ್ಯಾನಿಕ್ ಡೀಸೆಲ್(25 ಹುದ್ದೆ), ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಎಲೆಕ್ಟ್ರೀಷಿಯನ್, ಮೋಟಾರ್ ಮೆಕ್ಯಾನಿಕ್ ವೆಹಿಕಲ್, ವೆಲ್ಡರ್, ಫಿಟ್ಟರ್, ಮೋಟಾರ್ ವೆಹಿಕಲ್ ಬಾಡಿ ಬಿಲ್ಡರ್, ಮೆಕ್ಯಾನಿಕ್ ಆಟೋಮೊಬೈಲ್, ಪಾಸಾ ಹುದ್ದೆಗಳು ಖಾಲಿ ಇವೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಮೆಕ್ಯಾನಿಕ್ ಡೀಸೆಲ್(30 ಹುದ್ದೆ) ಹುದ್ದೆ ಖಾಲಿ ಇದ್ದು, 2 ವರ್ಷ ತರಬೇತಿ ಅವಧಿ. ಅರ್ಜಿ ಸಲ್ಲಿಸುವಾಗ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಎಸ್ಸೆಸ್ಸೆಲ್ಸಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 21 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸೈನಿಕರ ಮಕ್ಕಳಿಗೆ ನಿಯಮಾವಳಿಯನ್ವಯ ಮೀಸಲಾತಿ ನೀಡಲಾಗುವುದು. ತರಬೇತಿ ಭತ್ಯೆ ಐಟಿಐ ವಿದ್ಯಾರ್ಹತೆಗೆ ಒಂದು ವರ್ಷದ ಅವಧಿಯಲ್ಲಿ ಮಾಹೆಯಾನ ರೂ.7708 ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿದವರಿಗೆ ಮೊದಲನೇ ವರ್ಷದ ಅವಧಿಯಲ್ಲಿ ಮಾಹೆಯಾನ ರೂ.7708 ಮತ್ತು ಎರಡನೇ ವರ್ಷದ ಅವಧಿಯಲ್ಲಿ ಮಾಹೆಯಾನ ರೂ.8809 ಆಗಿದೆ. ಅರ್ಹ ಅಭ್ಯರ್ಥಿಗಳು ಆಗಸ್ಟ್, 25 ರೊಳಗೆ ಬೆಳಗ್ಗೆ 10 ರಿಂದ ಸಂಜೆ 5.30 ಗಂಟೆಯೊಳಗೆ ಹಾಗೂ ಶನಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರೊಳಗೆ ವಿಭಾಗೀಯ ಕಚೇರಿ, ಕರಾರಸಾ ನಿಗಮ, ಮುಕ್ರಂಪಾಡಿ, ದರ್ಬೆ, ಪುತ್ತೂರು ಇಲ್ಲಿಗೆ ಅರ್ಜಿ ಸಲ್ಲಿಸಿ, ಆಗಸ್ಟ್, 30 ರಂದು ಬೆಳಗ್ಗೆ 10 ಗಂಟೆಗೆ ಮೂಲ ದಾಖಲಾತಿಯೊಂದಿಗೆ ಶಿಶಿಕ್ಷು ಆಯ್ಕೆ ಸಮಿತಿಯ ಮುಂದೆ ನೇರ ಸಂದರ್ಶನಕ್ಕೆ ಹಾಜರಾಗುವಂತೆ ತಿಳಿಸಿದೆ. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಪ್ರತಿ-2, ಬ್ಯಾಂಕ್ ಪಾಸ್‍ಬುಕ್ ಪ್ರತಿ-2, ಆಧಾರ್ ನಂಬರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಬಗ್ಗೆ ಸಂಬಂಧಿಸಿದ ಬ್ಯಾಂಕ್‍ನಿಂದ ದೃಢೀಕರಣ ಪತ್ರ, ಇ-ಮೇಲ್ ಐಡಿ, ವಿದ್ಯಾರ್ಹತೆಯ ಮೂಲ ದಾಖಲಾತಿ ಪ್ರತಿ ಮತ್ತು ಜಾತಿ ಪ್ರಮಾಣದ ಮೂಲ ಪ್ರತಿ ಸಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ.