ಮಡಿಕೇರಿ ಆ.16 NEWS DESK : ಕೋಲ್ಕೋತ್ತಾದ ಆರ್ ಜಿಆರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ, ಹತ್ಯೆ ಹಾಗೂ ಆಸ್ಪತ್ರೆ ಮೇಲೆ ದುಷ್ಕಮಿ೯ಗಳ ದಾಳಿಯನ್ನ ಖಂಡಿಸಿ ಆ.17 ರಿಂದ 18 ರ ಬೆಳಗ್ಗಿನವರೆಗೆ ರಾಷ್ಟ್ರವ್ಯಾಪಿ ವೈದ್ಯಕೀಯ ಸೇವೆಗಳನ್ನು ಬಂದ್ ಮಾಡುವುದಾಗಿ ಭಾರತೀಯ ವೈದ್ಯಕೀಯ ಸಂಘ ಘೋಷಿಸಿದ್ದು, ಕೊಡಗಿನಲ್ಲಿಯೂ ವೈದ್ಯಕೀಯ ಸೇವೆಗಳು ಬಂದ್ ಆಗಲಿದೆ ಎಂದು ಸಂಘದ ಜಿಲ್ಲಾ ಘಟಕ ಮಾಹಿತಿ ನೀಡಿದೆ. ಕೊಡಗು ಜಿಲ್ಲೆಯ ಸಕಾ೯ರಿ ಮತ್ತು ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ ಗಳಲ್ಲಿ ಆ.17 ರಂದು ಬೆಳಗ್ಗೆ 6 ಗಂಟೆಯಿಂದ ಆ.18 ರ ಬೆಳಗ್ಗೆ 6 ಗಂಟೆಯವರೆಗೆ ಎಲ್ಲಾ ರೀತಿಯ ವೈದ್ಯಕೀಯ ಸೇವೆಗಳು ಸ್ಥಗಿತಗೊಳ್ಳಲಿದೆ. ಹೊರ ರೋಗಿಗಳ ಚಿಕಿತ್ಸಾ ಸೇವೆ ಮತ್ತು ಶಸ್ತ್ರಚಿಕಿತ್ಸಾ ಘಟಕಗಳು ಈ ಅವಧಿಯಲ್ಲಿ ಕಾಯ೯ನಿವ೯ಹಿಸುವುದಿಲ್ಲ ಎಂದು ಮಾಹಿತಿ ನೀಡಿರುವ ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ಅಧ್ಯಕ್ಷ ಡಾ.ಶ್ಯಾಮ್ ಅಪ್ಪಣ್ಣ ಮತ್ತು ಪ್ರಧಾನ ಕಾಯ೯ದಶಿ೯ ಡಾ.ಸಿ.ಆರ್.ಪ್ರಶಾಂತ್ ವೈದ್ಯರ ಈ ಮುಷ್ಕರಕ್ಕೆ ಸಾವ೯ಜನಿಕರೂ ಸಹಕಾರ ನೀಡುವಂತೆ ಕೋರಿದ್ದಾರೆ.










