ಕರ್ಕಾಳ ಆ.26 NEWS DESK : ಫಲವತ್ತಾದ ಮಣ್ಣೇ ಶ್ರೇಷ್ಠ ಸಂಪತ್ತು. ಆ ಮಣ್ಣಿನೊಂದಿಗೆ ನಮಗೆ ಅವಿನಾಭಾವ ಸಂಬಂಧ ಇದ್ದಾಗ ಮಾತ್ರ ಕೆಸರೆಂಬುದು ಆಪ್ತವಾಗುತ್ತಾ ಹೋಗುತ್ತದೆ. ರೈತನೇ ದೇಶವನ್ನು ಕಟ್ಟಬಲ್ಲವನು. ರೈತಾಪಿ ವರ್ಗ ನಿಷ್ಕ್ರಿಯವಾದರೆ ಬದುಕೇ ಇಲ್ಲ. ಆದ್ದರಿಂದ ವಿದ್ಯಾರ್ಥಿಗಳು ರೈತರ ಕಷ್ಟ, ಕೃಷಿಯಿಂದ ಸಿಗುವ ಆನಂದ ಅನುಭವದ ಮೂಲಕ ಪಡೆಯಬೇಕು ಎಂದು ಹಿರ್ಗಾನ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಸಂತೋಷ ಶೆಟ್ಟಿ ಹೇಳಿದರು. ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ ಕೆಸರುಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪಶು ವೈದ್ಯ ಸಾಣೂರಿನ ಜ್ಞಾನದೇವ ಮಾತನಾಡಿ, ಇಂದು ಜಗತ್ತೇ ವಿಷಮಯವಾಗುತ್ತಿದೆ. ಆಹಾರ ಪದಾರ್ಥಗಳೆಲ್ಲ ಕಲುಷಿತಗೊಂಡಿವೆ. ಇಂದಿನ ತುರ್ತು ಅಗತ್ಯ ಸಂಪೂರ್ಣ ಸಾವಯವ ಪ್ರಧಾನವಾದ ಕೃಷಿ ನಡೆಸುವುದಾಗಿದೆ. ಕೃಷಿ ಕಷ್ಟಕರವಾದರೂ ಅದನ್ನು ಇಷ್ಟಪಟ್ಟು ಮಾಡಬೇಕಾಗಿದೆ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಎಸ್.ಎಲ್.ಅಶ್ವಥ್ ಮಾತನಾಡಿ, ಕೃಷಿ ಮೂಲವೇ ನಾಗರಿಕತೆಯ ಮೂಲ. ಮಣ್ಣು ಕೇವಲ ಕೆಸರಲ್ಲ. ಬದಲಾಗಿ ಅದು ಬದುಕಿನ ಬುತ್ತಿ. ಆಹಾರ ಪದ್ಧತಿ ಕೆಟ್ಟು ಹಿಂದಿನವರ ಆಹಾರ ಕ್ರಮ ಶ್ರೇಷ್ಠವೆಂಬುದನ್ನು ಅರಿಯಬೇಕಾಗಿದೆ ಎಂದರು. ಸಹ ಸಂಸ್ಥಾಪಕ ಡಾ.ಬಿ.ಗಣನಾಥ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಜೀವನ ಕಲಿಕೆಯನ್ನು ರೂಢಿಸಿ ಕೃಷಿ ಚಟುವಟಿಕೆ ನಡೆಸುವ ಮೂಲಕ ಬದುಕಿನ ಪಾಠ ಕಲಿಸಲಾಗುತ್ತಿದೆ. ವಿದ್ಯಾರ್ಥಿಗಳು ಮಣ್ಣಿನ ಮಕ್ಕಳಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸಹ ಸಂಸ್ಥಾಪಕ ಕೆ.ಎಸ್.ಗಣಪತಿ ಭಟ್, ವಿದ್ಯಾಸಂಸ್ಥೆಯ ಉಪನ್ಯಾಸಕ ವರ್ಗದವರು, ಊರ ಗಣ್ಯರು ಭಾಗವಹಿಸಿದ್ದರು. ಜೀವಶಾಸ್ತ್ರ ಉಪನ್ಯಾಸಕ ಎಸ್.ಕೆ.ಲೋಹಿತ್ ಕಾರ್ಯಕ್ರಮ ನಿರೂಪಿಸಿದರು. ಎನ್ ಎಸ್ ಎಸ್ ಸಂಯೋಜನಾಧಿಕಾರಿ ಉಮೇಶ್ ವಂದಿಸಿದರು. ಕೆಸರುಡೊಂಜಿ ದಿನ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಕೃಷಿಕರಾದ ದಿನೇಶ್ ನಾಯಕ್ ಮತ್ತು ವಸಂತ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತುಳುನಾಡಿನ ವಿಶೇಷ ತಿಂಡಿ ತಿನಿಸುಗಳನ್ನು ಪರಿಚಯಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.
ಸಮಾರೋಪ ಸಮಾರಂಭ :: “ಹಸಿರೊಡನೆ ಕಲಿಕೆಯ ಕಲರವ ಕ್ರಿಯೇಟಿವ್ ಕೆಸರ್ಡೊಂಜಿ ದಿನ ಕಾರ್ಯಕ್ರಮ”ದ ಸಮಾರೋಪ ಸಮಾರಂಭಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಹಾಗೂ ಬಂಟ್ಸ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ, ಕೃಷಿ ನಮ್ಮ ಮೂಲ ಸಂಸ್ಕೃತಿ ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ತೆಳ್ಳಾರು ಪಲಾಯಿ ಬಾಕ್ಯಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕೆ.ಯೋಗೀಶ್ ಕಿಣಿ, ಕ್ರಿಯೇಟಿವ್ ಕಾಲೇಜಿನ ಸೃಜನಾತ್ಮಕ ಚಟುವಟಿಕೆಗಳ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಕೃಷಿಯ ಮಹತ್ವವನ್ನು ಕುರಿತು ತಿಳಿಸಿಕೊಟ್ಟರು. ಸಮಾರಂಭದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಡಾ.ಬಿಗಣನಾಥ ಶೆಟ್ಟಿ, ಎಂ.ಕೆ.ಆದರ್ಶ ಉಪಸ್ಥಿತರಿದ್ದರು. ಹಿಂದಿ ಭಾಷಾ ಮುಖ್ಯಸ್ಥರಾದ ಶ್ರೀಯುತ ವಿನಾಯಕ ಜೋಗ್ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಡಾ. ಬಿ.ಗಣನಾಥ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಉಪನ್ಯಾಸಕೇತರ ವರ್ಗದವರು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಊರ ನಾಗರಿಕರು ಭಾಗವಹಿಸಿದ್ದರು. ಕನ್ನಡ ಭಾಷಾ ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.