ನಂಜರಾಯಪಟ್ಟಣ NEWS DESK ಆ.27 : ನಂಜರಾಯಪಟ್ಟಣ ಮುಸ್ಲಿಂ ಜಮಾಅತ್ ಕಮಿಟಿ, ರಕ್ತ ನಿಧಿ ಕೇಂದ್ರ ಜಿಲ್ಲಾಸ್ಪತ್ರೆ ಹಾಗೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಇದರ ಸಹಭಾಗಿತ್ವದಲ್ಲಿ ಸ್ವಾತಂತ್ರ‍್ಯ ದಿನಾಚರಣೆಯ ಪ್ರಯುಕ್ತ 2ನೇ ವರ್ಷದ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ನಂಜರಾಯಪಟ್ಟಣ ನೂರುಲ್ ಇಸ್ಲಾಂ ಮದರಸದಲ್ಲಿ ನಡೆಯಿತು. ನಂಜರಾಯಪಟ್ಟಣ ಮಹಲ್ ಖತೀಬ ಮಹಮ್ಮದ್ ಸಹದಿ ಉಸ್ತಾದ್ ಅವರು ಪ್ರಾರ್ಥನೆ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಎಲ್.ವಿಶ್ವ ಅವರು ಮಾತನಾಡಿ ನಂಜರಾಯಪಟ್ಟಣ ಮುಸ್ಲಿಂ ಜಮಾಅತ್ ವತಿಯಿಂದ ಈ ರೀತಿಯ ಸಮಾಜಮುಖಿ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ. ಜನಪರ ಕಾರ್ಯಕ್ರಮಗಳಿಗೆ ಗ್ರಾ.ಪಂ ಸಂಪೂರ್ಣ ಸಹಕಾರ ನೀಡಲಿದೆ ಎಂದರು. ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಅವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ರಕ್ತದಾನ ಶಿಬಿರ ನಡೆಯುತ್ತಿರುವುದು ಸ್ವಾಗತಾರ್ಹ. ಇನ್ನು ಮುಂದೆಯೂ ಹೆಚ್ಚು ಹೆಚ್ಚು ಶಿಬಿರಗಳು ನಡೆಯಲಿ, ಜಮಾಅತ್ ಕಮಿಟಿಯಿಂದ ರೋಗಿಗಳಿಗೆ ಸಹಾಯ ಹಸ್ತ ಸಿಗಲಿ ಎಂದು ತಿಳಿಸಿದರು. ಜಮಾಅತ್ ಅಧ್ಯಕ್ಷ ಎಂ.ಎ.ಅಮೀರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರದಲ್ಲಿ 50ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿ ಇತರರಿಗೆ ಮಾದರಿಯಾದರು. ಗ್ರಾ.ಪಂ ಮಾಜಿ ಉಪಾಧ್ಯಕ್ಷ ಕೆ.ವಿ.ಪ್ರೇಮಾನಂದ, ಜಮಾಅತ್ ಮಾಜಿ ಅಧ್ಯಕ್ಷ ಕೆ.ಬಿ.ಅಬ್ದುಲ್ಲ, ನಂಜು0ಡೇಶ್ವರ ಯುವಕ ಸಂಘದ ಅಧ್ಯಕ್ಷ ಮ್ಯಾಥ್ಯು, ಯೂತ್ ಕಮಿಟಿ ಅಧ್ಯಕ್ಷ ಮುಜಮಿಲ್, ಜಮಾತ್ ಕಾರ್ಯದರ್ಶಿ ಹಾರಿಸ್, ಉಪಾಧ್ಯಕ್ಷ ಬಶೀರ್, ಖಜಾಂಚಿ ಹ್ಯಾರಿಸ್ ಮತ್ತಿತರರು ಉಪಸ್ಥಿತರಿದ್ದರು.