ಮಡಿಕೇರಿ NEWS DESK ಆ.27 : ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭ ಅವರು ಕೊಡಗು ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಿದ್ದು, ಮಕ್ಕಳ ಆರೋಗ್ಯ ಕಡೆ ಹೆಚ್ಚಿನ ಗಮನಹರಿಸಬೇಕು. ದೇಶದ ಅಭಿವೃದ್ಧಿಯಲ್ಲಿ ಮಕ್ಕಳ ಆರೋಗ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದ್ದಾರೆ. ಯಾವುದೇ ಮಗು ಅಪೌಷ್ಠಿಕತೆಯಿಂದ ಬಳಲಬಾರದು. ಆ ನಿಟ್ಟಿನಲ್ಲಿ ಪ್ರತಿದಿನ ಪೌಷ್ಠಿಕ ಆಹಾರವನ್ನು ನೀಡುವಂತಾಗಬೇಕು ಎಂದು ತಿಳಿಸಿದರು. ವಿವಿಧ ಅಂಗನವಾಡಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ತಡೆಗೋಡೆ ಇಲ್ಲದಿರುವುದು, ಸೂಕ್ತ ಕಿಟಕಿ ವ್ಯವಸ್ಥೆ ಇಲ್ಲದಿರುವುದು, ಮಕ್ಕಳಿಗೆ ಒಳಾಂಗಣ ಮತ್ತು ಹೊರಾಂಗಣ ಮೈದಾನದಲ್ಲಿ ಆಟವಾಡಲು ಸೂಕ್ತ ಸ್ಥಳದ ಅಭಾವ ಕಂಡುಬಂದಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಕೆಲವೊಂದು ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮವಾಗಿ ಅಡುಗೆ ಕೋಣೆ ಇದ್ದು, ಶುಚಿತ್ವಕ್ಕೆ ಒತ್ತು ನೀಡುವುದು ಶ್ಲಾಘನೀಯವಾಗಿದೆ ಎಂದು ಶುಭ ಹೇಳಿದರು. ಅಂಗನವಾಡಿ ವ್ಯಾಪ್ತಿಯ ಗರ್ಭಿಣೀಯರು, ಬಾಣಂತಿಯರು, ಮಕ್ಕಳಿಗೆ ಸಮರ್ಪಕವಾಗಿ ಪೌಷ್ಠಿಕ ಆಹಾರವನ್ನು ಪೂರೈಕೆ ಮಾಡುವುದು ಕಂಡುಬಂದಿದೆ ಎಂದು ಅವರು ತಿಳಿಸಿದರು. ಅಪೌಷ್ಠಿಕತೆ ನಿವಾರಣಾ ರಾಜ್ಯ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ವೇಣುಗೋಪಾಲ ಗೌಡ ಅವರ ನಿರ್ದೇಶನದಂತೆ ಇತ್ತೀಚೆಗೆ ಮಡಿಕೇರಿಯ ಸ್ಟೋನ್ ಹಿಲ್, ತ್ಯಾಗರಾಜ ಕಾಲೋನಿ, ಹಿಲ್‍ರಸ್ತೆ, ಕಡಗದಾಳು, ಮಾದಾಪುರ, ಕೊಳತ್ತೋಡು ಹೀಗೆ ವಿವಿಧ ಅಂಗನವಾಡಿಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಲಾಗಿದೆ ಎಂದರು.