ಮಡಿಕೇರಿ NEWS DESK ಆ.27 : ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಜೀವನದಲ್ಲಿ ಉದಾತ್ತವಾದ ಗುರಿ ಹೊಂದುವುದು ಮುಖ್ಯ. ವಿದ್ಯಾಭ್ಯಾಸದೊಂದಿಗೆ ತಾನು ಮಾಡುವ ಉದ್ಯೋಗದ ಬಗ್ಗೆ ಅಭಿಮಾನವಿರಿಸಿಕೊಳ್ಳಬೇಕು ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ. ನಾಡು ಕಂಡ ಧೀಮಂತ ರಾಜಕಾರಣಿ “ದಿ.ಎ.ಕೆ.ಸುಬ್ಬಯ್ಯ ಮತ್ತು ಪೊನ್ನಮ್ಮ ದತ್ತಿನಿಧಿ ಚಾರಿಟೇಬಲ್ ಟ್ರಸ್ಟ್” ವತಿಯಿಂದ ನಾಲ್ಕನೇ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಸಮಾರಂಭ ಶಾಸಕರ ಗೃಹ ಕಚೇರಿ ಆವರಣದಲ್ಲಿ ನಡೆಯಿತು.
ಎ.ಕೆ.ಸುಬ್ಬಯ್ಯ ಅವರ ಪುತ್ರರಾಗಿರುವ ಶಾಸಕ ಪೊನ್ನಣ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅನೇಕ ವಿದ್ಯಾರ್ಥಿಗಳು ತಮ್ಮ ಪೋಷಕರ ಅರ್ಥಿಕ ಸಂಕಷ್ಟ ಮತ್ತು ಅಸಹಾಯಕತೆಗಳಿಂದಾಗಿ ವಿದ್ಯಾಭ್ಯಾಸವನ್ನು ಮೊಟುಕುಗಳಿಸುತ್ತಾರೆ. ಈ ಹಿನ್ನೆಲೆಯಲ್ಲಿ ತಮ್ಮ ಪೋಷಕರ ಹೆಸರಿನಲ್ಲಿ ಕುಟುಂಬ ವರ್ಗದ ಸಹಕಾರದಿಂದ ದತ್ತಿ ನಿಧಿ ಸ್ಥಾಪಿಸಿ, ಬಡ ವಿದ್ಯಾರ್ಥಿಗಳು ಹಾಗೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿನಿಯರನ್ನು ಗುರುತಿಸಿ ಪದವಿ ಮಟ್ಟದಲ್ಲಿ ಪ್ರೋತ್ಸಾಹ ನೀಡುತ್ತಾ ಬರಲಾಗಿದೆ. ಪದವಿ ಪಡೆದ ವಿದ್ಯಾರ್ಥಿಗಳು ಕೇವಲ ಉದ್ಯೋಗ ಗಿಟ್ಟಿಸಿಕೊಳ್ಳಲು ಮಾತ್ರ ಸಿಮೀತವಾಗದೆ, ಸಾಮಾಜಿಕ ಬದ್ಧತೆಯನ್ನು ಹೊಂದಬೇಕು ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ಚಿದ್ವಿಲಾಸ್, ಶಾಸಕರು ಹಾಗೂ ಅವರ ಕುಟುಂಬ ವರ್ಗ ಪೋಷಕರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿರುವುದು ಶ್ಲಾಘನೀಯ. ಪ್ರೋತ್ಸಾಹ ಧನವನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಶಾಸಕ ಎ.ಎಸ್.ಪೊನ್ನಣ್ಣ ಅವರು ಒಬ್ಬ ಸಜ್ಜನ ರಾಜಕಾರಣಿ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಬ್ಬಯ್ಯ ಅವರ ಮತ್ತೊಬ್ಬ ಪುತ್ರ ನರೇನ್ ಕಾರ್ಯಪ್ಪ, ವಿದ್ಯಾರ್ಥಿಗಳ ಒಳಿತಿಗಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ. ದತ್ತಿ ನಿಧಿ ಕಾರ್ಯಕ್ರಮ ಆರಂಭವಾಗಿ ಮೂರು ವರ್ಷ ಕಳೆದಿದ್ದು, ಇದು ನಾಲ್ಕನೇ ವರ್ಷದ ಕಾರ್ಯಕ್ರಮವಾಗಿದೆ. ಇಂದಿನವರೆಗೆ 130 ಪದವಿ ವಿದ್ಯಾರ್ಥಿನಿಯರಿಗೆ ಸುಮಾರು 31 ಲಕ್ಷ ರೂ.ಗಳ ಪ್ರೋತ್ಸಾಹ ಧನ ನೀಡಲಾಗಿದೆ ಎಂದರು. ಧನ ಸಹಾಯ ಪಡೆದುಕೊಂಡಿರುವ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಪಡೆದುಕೊಂಡು ನಾಡಿನ ಮತ್ತು ಪೋಷಕರ ಉನ್ನತ್ತಿಗಾಗಿ ಶ್ರಮಿಸಬೇಕು ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿದರು. ವೇದಿಕೆಯಲ್ಲಿ ಹಿರಿಯರಾದ ಗಂಗಮ್ಮ ಸುಬ್ರಮಣಿ, ನರೇನ್ ಕಾರ್ಯಪ್ಪ ಅವರ ಪತ್ನಿ ಚಂದಲೆ ಕಾರ್ಯಪ್ಪ ಉಪಸ್ಥಿತರಿದ್ದರು. ಶಿಕ್ಷಕರಾದ ಮಂಜುನಾಥ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.











