ಮಡಿಕೇರಿ NEWS DESK ಆ.27 : ಶತಮಾನೋತ್ಸವ ಸಂಭ್ರಮದಲ್ಲಿರುವ ಮೂರ್ನಾಡು ಸಹಕಾರ ಸ್ಪೋರ್ಟ್ಸ್ ಕ್ಲಬ್‌ನಿಂದ ಪ್ರಸಕ್ತ ಸಾಲಿನ ಸೆ.3 ರಂದು ಮೂರ್ನಾಡಿನಲ್ಲಿ ಕೈಲ್ ಪೊಳ್ದ್ ಹಬ್ಬದ ಆಟೋಟ ಸ್ಪರ್ಧೆಗಳು ನಡೆಯಲಿದೆಯೆಂದು ಕ್ಲಬ್‌ನ ಅಧ್ಯಕ್ಷರಾದ ಮುಂಡಂಡ ಪವಿ ಸೋಮಣ್ಣ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು 1924 ರಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಒತ್ತು ನೀಡುವ ಪ್ರಮುಖ ಧ್ಯೇಯದೊಂದಿಗೆ ಸ್ಥಾಪನೆಯಾದ ‘ಮೂರ್ನಾಡು ಸಹಕಾರ ಸ್ಪೋರ್ಟ್ಸ್ ಕ್ಲಬ್’ ಇದೀಗ ತನ್ನ ನೂರನೇ ವರ್ಷದ ಕ್ರೀಡಾಕೂಟವನ್ನು ವಿಶೇಷವಾಗಿ ಆಯೋಜಿಸಲು ಉದ್ದೇಶಿಸಿ ಕಾರ್ಯಯೋಜನೆಗಳನ್ನು ರೂಪಿಸಿಕೊಂಡಿದೆ. ಇಡೀ ರಾಜ್ಯದಲ್ಲೆ ಕ್ರೀಡಾ ಚಟುವಟಿಕೆಗಳ ಉತ್ತೇಜನಕ್ಕಾಗಿ ಸ್ಥಾಪಿತವಾಗಿರುವ ಏಕೈಕ ಸಹಕಾರ ಸಂಘ ‘ಮೂರ್ನಾಡು ಸಹಕಾರ ಸ್ಪೋರ್ಟ್ಸ್ ಕ್ಲಬ್’ ಎಂದರು. ಕೈಲ್ ಮುಹೂರ್ತ ಕ್ರೀಡಾ ಕೂಟವನ್ನು ಸೆ.3 ರಂದು ಮಧ್ಯಾಹ್ನ 12.30 ಗಂಟೆಗೆ ಮೂರ್ನಾಡು ವಿದ್ಯಾಸಂಸ್ಥೆಯ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೆ.ಎಸ್. ಸುಂದರರಾಜ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್., ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೊಡಂದೇರ ಬಾಂಡ್ ಗಣಪತಿ, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಕೇಟೋಳಿರ ಎಸ್. ಹರೀಶ್ ಪೂವಯ್ಯ, ಮಡಿಕೇರಿ ಗ್ರಾಮಾಡಳಿತ ಅಧಿಕಾರಿ ಅಕ್ಷತಾ ಬಿ. ಶೆಟ್ಟಿ ಅವರು ಪಾಲ್ಗೊಳ್ಳಲಿದ್ದಾರೆ. ವಿವಿಧ ಆಟೋಟ ಸ್ಪರ್ಧೆಗಳು ಸಂಜೆ 5.30 ಗಂಟೆಯವರೆಗೆ ನಡೆಯಲಿದೆಯೆಂದು ಮಾಹಿತಿಯನ್ನಿತ್ತರು. ಕ್ಲಬ್‌ನ ಶತಮಾನೋತ್ಸವ ಹಿನ್ನಲೆಯ ಕ್ರೀಡಾಕೂಟವಾದ್ದರಿಂದ ಈ ಬಾರಿ ವಿಶೇಷವಾಗಿ ಮೆರಥಾನ್ ಮತ್ತು ಸೈಕ್ಲಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕೊಂಡಂಗೇರಿಯಿಂದ ಕ್ರೀಡಾಂಗಣದವರೆಗಿನ 5 ಕಿ.ಮೀ. ಅಂತರದ ಮೆರಥಾನ್, ಬೇತ್ರಿಯಿಂದ ಕ್ರೀಡಾಂಗಣದವರೆಗಿನ 5 ಕಿ.ಮೀ. ಅಂತರದ ಸೈಕ್ಲಿಂಗ್ ಸ್ಪರ್ಧೆಯನ್ನು ವಿಶೇಷವಾಗಿ ಆಯೋಜಿಸಲಾಗಿದೆಯೆಂದು ತಿಳಿಸಿದರು. ಕ್ರೀಡಾಕೂಟದಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಪುರುಷರು, ಮಹಿಳೆಯರು, ಬಾಲಕರು, ಬಾಲಕಿಯರಿಗೆ ವಿವಿಧ ವಿಭಾಗಗಳಲ್ಲಿ ಓಟದ ಸ್ಪರ್ಧೆ, ಭಾರದ ಗುಂಡು ಎಸೆತ, ಮನರಂಜನಾ ಸ್ಪರ್ಧೆಗಳು, ವಾದ್ಯ ಕುಣಿತ ನಡೆಯಲಿರುವುದಾಗಿ ವಿವರಗಳನ್ನಿತ್ತರು. ಕಾಂತೂರು ಮೂರ್ನಾಡು ಸೇರಿದಂತೆ ಪಂಚಾಯ್ತಿಗೆ ಒಳಪಟ್ಟ ಐಕೊಳ, ಕಿಗ್ಗಾಲು, ಬಾಡಗ, ಮುತ್ತಾರ್ಮುಡಿ ಮತ್ತು ಕೋಡಂಬೂರು ಗ್ರಾಮಸ್ಥರಿಗೆ ಸೀಮಿತವಾಗಿ ಹಗ್ಗಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಹಗ್ಗಜಗ್ಗಾಟ ಸ್ಪರ್ಧೆಯೊಂದನ್ನು ಹೊರತು ಪಡಿಸಿದಂತೆ ಉಳಿದ ಯಾವುದೇ ಸ್ಪರ್ಧೆಗಳಲ್ಲಿ ಜಾತಿ ಮತಗಳ ಭೇದವಿಲ್ಲದೆ ಯಾರು ಬೇಕಾದರು ಪಾಲ್ಗೊಳ್ಳಬಹುದೆಂದು ಸ್ಪಷ್ಟಪಡಿಸಿದರು. ಕಾಂತೂರು ಮೂರ್ನಾಡು ಪಂಚಾಯ್ತಿ ವ್ಯಾಪ್ತಿಯ ಆರು ಗ್ರಾಮಗಳಿಗೆ ಸೀಮಿತವಾಗಿ ಸಂಸ್ಥೆಯ ಯಾವೆಲ್ಲ ಸದಸ್ಯರು ನಿರಂತರವಾಗಿ ಭತ್ತದ ಕೃಷಿಯನ್ನು ಮಾಡಿಕೊಂಡು ಬಂದಿದ್ದಾರೊ ಅವರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆಂದು ಮುಂಡಂಡ ಪವಿ ಸೊಮಣ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಹಕಾರ ಸ್ಪೋರ್ಟ್ಸ್ ಕ್ಲಬ್ ಗೌರವ ಕಾರ್ಯದರ್ಶಿ ಮೇರ್ಕಜೆ ಲೋಹಿತ್ ಸೋಮಯ್ಯ, ನಿರ್ದೇಶಕರಾದ ಮೂಡೇರ ಮೇದಪ್ಪ, ಕೋಟೇರ ಮೇದಪ್ಪ ಹಾಗೂ ಪುದಿಯೊಕ್ಕಡ ಕಾಶಿ ಕರುಂಬಯ್ಯ ಉಪಸ್ಥಿತರಿದ್ದರು.