ಮಡಿಕೇರಿ NEWS DESK ಆ.31 : ಪುಸ್ತಕ ಮತ್ತು ಲೇಖನಿ ಹಿಡಿದು ಶೈಕ್ಷಣಿಕ ಗುರಿ ಸಾಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಕೆಸರು ಗದ್ದೆಗಿಳಿದು ಆಹಾರದ ಮಹತ್ವ ಮತ್ತು ಉತ್ಪಾದನೆಯ ಶ್ರಮದ ಕುರಿತು ತಿಳಿದುಕೊಂಡರು. ಶಾಲೆಯ ಪಾಠಕ್ಕಿಂತ ಗದ್ದೆಯಲ್ಲಿ ಮಾಡುವ ಪ್ರಾಯೋಗಿಕ ನಾಟಿ ಕಾರ್ಯದ ಪ್ರಯತ್ನ ವಿದ್ಯಾರ್ಥಿಗಳಲ್ಲಿ ಬೇಸಾಯದ ಕುರಿತು ಮನದಟ್ಟು ಮಾಡಿಕೊಡಲು ಸಹಕಾರಿಯಾಗುತ್ತದೆ. ಈ ಕಾರಣದಿಂದ ಕನೆಕ್ಟಿಂಗ್ ಕೊಡವಾಸ್ ಸಂಘಟನೆ ವಿದ್ಯಾರ್ಥಿಗಳಿಗಾಗಿಯೇ ವಿರಾಜಪೇಟೆಯ ಬೊಳ್ಳರಿಮಾಡು ಗ್ರಾಮದ ಕೆಸರು ಗದ್ದೆಯಲ್ಲಿ “ನಾಟಿಪಣಿ” ಎಂಬ ಬೇಸಾಯ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ವಿರಾಜಪೇಟೆಯ ಕಾವೇರಿ ಶಾಲೆಯ 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳು ಸಂಭ್ರಮದಿಂದ ನಾಟಿ ಮಾಡಿದರು. ಕೈಕೆಸರಾದರೆ ಬಾಯಿ ಮೊಸರು ಎಂಬAತೆ ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ನಾಟಿ ಕಾರ್ಯದಲ್ಲಿ ಪಾಲ್ಗೊಂಡರು. ಆಯೋಜಕ ಪುದಿಯೊಕ್ಕಡ ಸೂರಜ್ ಹಾಗೂ ಪಾಲೆಂಗಡ ಅಮಿತ್ ಅವರು ನಾಟಿ ಹೇಗೆ ಮಾಡಬೇಕು ಎಂಬುವುದನ್ನು ವಿವರಿಸಿದರು. ವಿದ್ಯಾರ್ಥಿಗಳನ್ನು ಉತ್ತೇಜಿಸಿ ಪ್ರಾಯೋಗಿಕ ನಾಟಿ ಕಾರ್ಯಕ್ಕೆ ಹುರಿದುಂಬಿಸಿದರು. ಕಾವೇರಿ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ಸಂಯೋಜಕಿ ಅಮೃತ ಅರ್ಜುನ್ ಹಾಗೂ ಸಹ ಶಿಕ್ಷಕಿ ಭಾಗ್ಯ ಬಿ.ಡಿ ಉಪಸ್ಥಿತರಿದ್ದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುದೇಶ್ ಬಿ.ಎಸ್, ಕಾರ್ಯದರ್ಶಿ ವಿನೋದ್ ಪಿ.ಎನ್, ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕಿಯರು, ಸಹ ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.