ಮಡಿಕೇರಿ NEWS DESK ಆ.31 : ಭ್ರಷ್ಟಾಚಾರವನ್ನು ಹೆಗಲಿನಲ್ಲಿ ಹೊತ್ತುಕೊಂಡು ತೆವಳುತ್ತಾ ಸಾಗುತ್ತಿರುವ ರಾಜ್ಯ ಸರ್ಕಾರ, ಈ ಭಾರವನ್ನು ಹೊತ್ತುಕೊಳ್ಳಲಾಗದೆ ಕೆಲವೇ ದಿನಗಳಲ್ಲಿ ಉರುಳಿ ಬೀಳುವ ಸಂಭವ ಹೆಚ್ಚಿದೆ ಎಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಭವಿಷ್ಯ ನುಡಿದಿದ್ದಾರೆ.
ಗೋಣಿಕೊಪ್ಪಲಿನ ಹರಿಶ್ಚಂದ್ರಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ವಿರಾಜಪೇಟೆ ಮಂಡಲ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ್ದ ‘ಸದಸ್ಯತ್ವ ಅಭಿಯಾನ’ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಉಚಿತ ಯೋಜನೆಗಳ ಮೂಲಕ ಸರ್ಕಾರ ಶೂನ್ಯ ಪ್ರಗತಿಯನ್ನು ಕಾಣುತ್ತಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಶಕ್ತಿಯನ್ನು ಕಳೆದುಕೊಂಡಿದೆ. ಬಿಜೆಪಿ ದೇಶ ಕಟ್ಟಲು ಹೊರಟಿದೆ, ದೇಶವನ್ನು ಆರ್ಥಿಕ ಪ್ರಗತಿಯ ಮೂಲಕ ಅಭಿವೃದ್ಧಿಯತ್ತ ಕೊಂಡೊಯ್ಯಲು ಕೇಂದ್ರ ಸರ್ಕಾರ ಪಣತೊಟ್ಟಿದೆ. ರಾಜ್ಯ ಸರ್ಕಾರ ಇಂತಹ ಜನಪರ ಚಟುವಟಿಕೆಗಳಿಗೆ ಸ್ಪಂದಿಸದೆ, ಈ ಹಿಂದೆ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗಾಗಿ ಮೀಸಲಿಟ್ಟಿದ್ದ ಅನುದಾನವನ್ನೆ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು. ಕೊಡಗು ಜಿಲ್ಲೆಯಲ್ಲಿ ಯಾವುದೇ ಪ್ರಗತಿಪರ ಚಟುವಟಿಕೆ ಕಾಣಿಸುತ್ತಿಲ್ಲ. ಬದಲಾಗಿ ಹಳ್ಳಿಗೊಂದು ಇಸ್ಪೇಟ್ ಕ್ಲಬ್‌ಗಳು, ಮರಳು ದಂಧೆ, ಮರದಂಧೆ, ಅಕ್ರಮ ಜಾನುವಾರು ಸಾಗಾಟ, ಚೆತ್‌ಕಲ್ ದಂಧೆ ಹೆಚ್ಚಾಗಿದೆ. 250 ಕೋಟಿ ಅನುದಾನ ತಂದಿದ್ದೇವೆ ಎಂದು ಶಾಸಕರು ಸುಳ್ಳು ಹೇಳುತ್ತಾ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಕೆ.ಜಿ.ಬೋಪಯ್ಯ ಆರೋಪಿಸಿದರು. ವಿಧಾನ ಪರಿಷತ್ ಸದಸ್ಯ ಸುಜಾಕುಶಲಪ್ಪ ಮಾತನಾಡಿ, ರಾಜ್ಯ ಸರ್ಕಾರದ ಆಡಳಿತದಲ್ಲಿ ಜನಪರವಾದ ನಿಲುವುಗಳು ಕಾಣುತ್ತಿಲ್ಲ. ಪ್ರತಿಯೊಂದು ವಸ್ತುಗಳ ತೆರಿಗೆ ಹೆಚ್ಚಿಸಿ ಜನವಿರೋಧಿ ಆಡಳಿತವನ್ನು ನಡೆಸುತ್ತಿದೆ. ಅಭಿವೃದ್ಧಿ ಎಂಬುವುದು ಮರೀಚಿಕೆಯಾಗಿದೆ. ಸರ್ಕಾರಿ ನೌಕರರಿಗೆ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸರ್ಕಾರ ಇದೆ ಎಂದು ವ್ಯಂಗ್ಯವಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿಯ ವಿರಾಜಪೇಟೆ ಮಂಡಲ ಅಧ್ಯಕ್ಷ ಸುವಿನ್ ಗಣಪತಿ, ಸದಸ್ಯತ್ವ ಅಭಿಯಾನದ ಗುರಿಯನ್ನು ಶೀಘ್ರವಾಗಿ ತಲುಪಬೇಕಾಗಿದೆ. ಕಳೆದ ಬಾರಿ ಜಿಲ್ಲೆಯಲ್ಲಿ 58ಸಾವಿರ ಸದಸ್ಯತ್ವ ಮಾಡಲಾಗಿತ್ತು. ಈ ಬಾರಿ ಒಂದು ಲಕ್ಷಕು ಹೆಚ್ಚಿನ ಸದಸ್ಯತ್ವ ಹೊಂದುವ ಮೂಲಕ ಗುರಿಯನ್ನು ತಲುಪಬೇಕಾಗಿದೆ. ಈ ನಿಟ್ಟಿನಲ್ಲಿ ಸಂಘಟನಾತ್ಮಕವಾಗಿ ಬಿಜೆಪಿ ಸದೃಢವಾಗಿ ನಿಲ್ಲಬೇಕಾಗಿದೆ ಎಂದು ಕರೆ ನೀಡಿದರು. ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರಾದ ರಾಬಿನ್ ದೇವಯ್ಯ ಹಾಗೂ ಎಂ.ಎಂ.ರವೀಂದ್ರ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲೀರ ಚಲನ್ ಕುಮಾರ್, ಕಾರ್ಯದರ್ಶಿ ಗುಮ್ಮಟ್ಟೀರ ಕಿಲನ್ ಗಣಪತಿ, ಉಪಾಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ತಾಲೂಕು ಮಂಡಲ ಕಾರ್ಯದರ್ಶಿ ಮುದ್ದಿಯಡ ಮಂಜುಗಣಪತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ತಾಲೂಕು ಮಂಡಲ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. 











