ಮಡಿಕೇರಿ NEWS DESK ಆ.31 : ವಿರಾಜಪೇಟೆ ತಾಲ್ಲೂಕಿನ ಬೇತ್ರಿಯ ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ ಮಾಡಿದ ಇಬ್ಬರು ಅಂತರರಾಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲಿಸರು ಯಶಸ್ವಿಯಾಗಿದ್ದಾರೆ. ಕೇರಳದ ಇರ್‌ಟ್ಟಿ ತಾಲ್ಲೂಕಿನ ಮಂಟಪ ಪರಂಬುವಿನ ಸಲೀಂ ಟಿ.ಎ.(42) ಹಾಗೂ ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು ಗ್ರಾಮದ ಗಾಂಧಿ ನಗರದ ಸಂಜಯ್ ಕುಮಾರ್ ಅಲಿಯಾಸ್ ಸಂಜು(30) ಬಂಧಿತ ಆರೋಪಿಗಳು. ಬೇತ್ರಿಯಲ್ಲಿರುವ ನಾಸರ್ ಕೂರನ್ ಎಂಬುವವರ ಸೂಪರ್ ಮಾರ್ಕೆಟ್ ಅಂಗಡಿ ಮಳಿಗೆಯಿಂದ, ಬೀಗ ಒಡೆದು 25 ಸಾವಿರ ನಗದು ಸೇರಿದಂತೆ ಸಿಗರೇಟ್ ಪ್ಯಾಕ್‌ಗಳನ್ನು ಇದೇ ಆ.28 ರಂದು ಕಳವು ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ಷಿಪ್ರ ತನಿಖೆÉ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದರು. ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ 11 ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ ಕಳ್ಳತನ ಮಾಡಿ ಕೃತ್ಯಕ್ಕೆ ಬಳಸುತ್ತಿದ್ದ ಸುಮಾರು 1.50ಲಕ್ಷ ಮೌಲ್ಯದ 3 ದ್ವಿಚಕ್ರ ವಾಹನಗಳು ಮತ್ತು 9050 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೇತ್ರಿ ಅಂಗಡಿ ಮತ್ತು ಬಿಟ್ಟಂಗಾಲ ದೇವಸ್ಥಾನದ ಹುಂಡಿ ಕಳ್ಳತನದ 2 ಪ್ರಕರಣಗಳಲ್ಲಿ, ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ 1 ಪ್ರಕರಣ, ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಪುಲಿಕಿಮಾಡು ದರ್ಗಾ ಭಂಡಾರ ಕಳ್ಳತನ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಮೂರ್ನಾಡಿನ ಸತೀಶ್ ಎಂಬವರ ಮನೆಯಲ್ಲಿ ಕಳ್ಳತನಕ್ಕೆ ಪ್ರಯತ್ನ ಮಾಡಿರುವುದು, ಮೈಸೂರು ನಗರದ ಅಶೋಕ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ದ್ವಿ ಚಕ್ರ ವಾಹನ ಕಳ್ಳತನದ 2 ಪ್ರಕರಣಗಳು, ಕೇರಳಾ ರಾಜ್ಯದ ಇರಟ್ಟಿ ಪೊಲೀಸ್ ಠಾಣೆಯ 3 ಕಳ್ಳತನ ಪ್ರಕರಣಗಳು ಮತ್ತು ಕೇರಳ ರಾಜ್ಯದ ಕೆಳಗಂ ಪೊಲೀಸ್ ಠಾಣೆಯ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ಜಿಲ್ಲಾ ಎಸ್‌ಪಿ ಹಾಗೂ ಹೆಚ್ಚುವರಿ ಎಸ್‌ಪಿ ಕೆ.ಸುಂದರ್ ರಾಜ್ ಅವರ ನಿರ್ದೇಶನದಂತೆ, ವಿರಾಜಪೇಟೆ ಉಪ ವಿಭಾಗದ ಡಿ.ವೈ.ಎಸ್.ಪಿ ಮೋಹನ್ ಕುಮಾರ್ ಉಸ್ತುವಾರಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಿರಾಜಪೇಟೆ ವೃತ್ತ ನಿರೀಕ್ಷರಾದ ಬಿ.ಎಸ್.ಶಿವರುದ್ರ, ವಿರಾಜಪೇಟೆ ಗ್ರಾಮಾಂತರ ಠಾಣೆಯ ಪಿಎಸ್‌ಐ ಮಂಜುನಾಥ್.ಸಿ.ಸಿ ಮತ್ತು ವಾಣಿಶ್ರೀ ಹಾಗೂ ಸಿಬ್ಬಂದಿ ವರ್ಗದವರು, ವೈಜ್ಞಾನಿಕ ತನಿಖಾ ಘಟಕದ ಪಿ.ಐ. ರಾಮಕೃಷ್ಣ ಪಾಲ್ಗೊಂಡಿದ್ದರು.