ನಾಪೋಕ್ಲು ಸೆ.2 NEWS DESK : ಬಲ್ಲಮಾವಟಿಯ ನೇತಾಜಿ ಪ್ರೌಢಶಾಲೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಹ ಶಿಕ್ಷಕಿ ಎಂ.ಎ.ಕಾವೇರಿಯಮ್ಮ ಅವರನ್ನು ಆಡಳಿತ ಮಂಡಳಿ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಸಂಸ್ಥೆಯ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಆಡಳಿತ ಮಂಡಳಿ ಪ್ರಮುಖರು ಹಾಗೂ ಶಿಕ್ಷಕರು ಸನ್ಮಾನಿಸಿ, ಗೌರಿವಿಸದರು. ಕಾರ್ಯದರ್ಶಿ ಚಂಗೇಟಿರ ಅಚ್ಚಯ್ಯ ಮಾತನಾಡಿ, ಸಮಾಜದ ಉತ್ತಮ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರದ್ದು. ಸಮಾಜ ವಿಜ್ಞಾನ ಶಿಕ್ಷಕಿಯಾಗಿ ಕಾವೇರಿಯಮ್ಮ ಉತ್ತಮ ಸೇವಾ ಮನೋಭಾವನೆಯನ್ನು ಹೊಂದಿದ್ದರು ಎಂದರು. ನಿರ್ದೇಶಕ ಮುಕ್ಕಾಟಿರ ವಿನಯ್ ಮಾತನಾಡಿ, ಸಹನೆ, ವಿನಯತೆ, ಸರಳ ಜೀವನ, ಕ್ಷಮಾ ಗುಣ ಸೇರಿದಂತೆ ಉತ್ತಮ ಶಿಕ್ಷಕರಲ್ಲಿ ಇರಬೇಕಾದ ಗುಣಗಳನ್ನು ಕಾವೇರಿಯಮ್ಮ ಹೊಂದಿದ್ದರು. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು. ಆಡಳಿತ ಮಂಡಳಿ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರೌಢಶಾಲೆ ಹಲವು ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿದೆ. ಉತ್ತಮ ಆಡಳಿತ ಮಂಡಳಿ ಹಾಗೂ ಶಿಕ್ಷಕರಿಂದ ಸಂಸ್ಥೆಯು ಪ್ರಗತಿಯನ್ನು ಕಂಡಿದೆ ಎಂದರು. ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಮುಕ್ಕಾಟಿರ ಸುತನ್ ಸುಬ್ಬಯ್ಯ, ಕಾರ್ಯದರ್ಶಿ ಚಂಗೇಟಿರ ಅಚ್ಚಯ್ಯ, ಸಂಚಾಲಕ ನುಚ್ಚುಮಣಿಯಂಡ ಚಿಂಗಪ್ಪ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು, ಎಂ.ಎ ಕಾವೇರಿಯಮ್ಮ ಅವರ ಪತಿ ಮೂವೇರ ನಾಣಯ್ಯ, ಶಾಲೆಯ ಸಿಬ್ಬಂದಿ ವರ್ಗ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.