ಬೆಂಗಳೂರು ಸೆ.9
NEWS DESK : ಕನ್ನಡದ ಹಿರಿಯ ಪತ್ರಕರ್ತ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆ ಸಂಪಾದಕ ವಸಂತ ನಾಡಿಗೇರ (59) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೂಲತಃ ಹಾವೇರಿ ಜಿಲ್ಲೆ ರಾಣಿಬೆನ್ನೂರಿನವರಾದ ನಾಡಿಗೇರ್ ಅವರು ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ವಿಶ್ವವಾಣಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು. ವಿಜಯ ಕರ್ನಾಟಕದಲ್ಲಿ ಅವರು ಶೀರ್ಷಿಕೆಗಳನ್ನು ಕೊಡುವುದರಲ್ಲಿ ಹಲವು ವಿನೂತನ ಪ್ರಯೋಗಗಳನ್ನು ಕೈಗೊಂಡು, ಕನ್ನಡ ಪತ್ರಿಕೋದ್ಯಮಕ್ಕೇ ಹೊಸ ಆಯಾಮ ನೀಡಿದ್ದರು. ಹಿಂದಿ ಚಿತ್ರರಂಗದ ಖ್ಯಾತ ಗಾಯಕಿ ಲತಾ ಮಂಗೇಶಕರ್ ಜೀವನ ಚರಿತ್ರೆಯನ್ನು ಕನ್ನಡದಲ್ಲಿ ಬರೆದಿದ್ದಾರೆ. ಸುಮಾರು ಮೂವತ್ತು ವರ್ಷಗಳಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದ ವಸಂತ ನಾಡಿಗೇರ, ತಮ್ಮ ವಿಶಿಷ್ಟ ಮಾತಿನ ಶೈಲಿ ಹಾಗೂ ಪನ್ ಹೆಡ್ಡಿಂಗ್ಗಳ ಮೂಲಕವೇ ಕನ್ನಡ ಪತ್ರಿಕೋದ್ಯಮದಲ್ಲಿ ಖ್ಯಾತಿ ಪಡೆದಿದ್ದರು. ಸರಳ, ಸಜ್ಜನಿಕೆಯ ವಸಂತ ನಾಡಿಗೇರ ಅವರು ಕನ್ನಡ ಪ್ರಭ, ವಿಜಯಕರ್ನಾಟಕ. ವಿಶ್ವವಾಣಿ ನಂತರ ಎರಡು ವರ್ಷಗಳಿಂದ ಸಂಯುಕ್ತ ಕರ್ನಾಟಕ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಗಣ್ಯರ ಸಂತಾಪ : ಹಿರಿಯ ಪತ್ರಕರ್ತ ವಸಂತ ನಾಡಿಗೇರ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಿರಿಯ ಪತ್ರಕರ್ತರಾದ ವಸಂತ ನಾಡಿಗೇರ ಅವರ ನಿಧನವಾರ್ತೆ ನೋವುಂಟು ಮಾಡಿದೆ. ವಿಜಯ ಕರ್ನಾಟಕದಲ್ಲಿ ಹಿರಿಯ ಸಹಾಯಕ ಸಂಪಾದಕರಾಗಿ, ಸಂಯುಕ್ತ ಕರ್ನಾಟಕದಲ್ಲಿ ಸಂಪಾದಕರಾಗಿ, ಹೀಗೆ ಹಲವು ದಶಕಗಳಿಂದ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದ ವಸಂತ ನಾಡಿಗೇರ ಅವರ ಅಗಲಿಕೆಯಿಂದ ಪತ್ರಿಕಾ ರಂಗಕ್ಕೆ ಬಹುದೊಡ್ಡ ನಷ್ಟವಾಗಿದೆ. ಮೃತರ ಆತಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಅವರ ದುಃಖತಪ್ತ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು ಎಂದು ಸಂತಾಪ ಸೂಚಿಸಿದ್ದಾರೆ. ವಸಂತ ನಾಡಿಗೇರ ಅವರ ನಿಧನಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಂಸದ ಬಸವರಾಜ ಬೊಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಕನ್ನಡದ ಹಲವು ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ.