ಮಂಗಳೂರು NEWS DESK ಸೆ.11 : ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿದ ಆಟೋರಿಕ್ಷಾವನ್ನು ಮೇಲೆತ್ತಿ ತಾಯಿಯನ್ನು ರಕ್ಷಿಸಿದ 7ನೇ ತರಗತಿಯ ವಿದ್ಯಾರ್ಥಿನಿ ವೈಭವಿಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸನ್ಮಾನಿಸಿ ಪ್ರಶಂಸೆ ವ್ಯಕ್ತಪಡಿಸಿದೆ. ಕಿನ್ನಿಗೋಳಿಯಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭ ರಿಕ್ಷಾ ಡಿಕ್ಕಿಯಾಗಿ ಅದರಡಿಗೆ ಬಿದ್ದ ತಾಯಿಯನ್ನು ತಕ್ಷಣವೇ ಧಾವಿಸಿ ಬಂದು ರಕ್ಷಿಸಿದ ಬಾಲಕಿ ವೈಭವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಶ್ಲಾಘಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಷೈ ಮುಗಿಲನ್ ಅವರು ವೈಭವಿಯನ್ನು ತಮ್ಮ ಕಚೇರಿಗೆ ಕರೆಸಿ ಸನ್ಮಾನಿಸಿದರು. ಧೈರ್ಯ ಮೆರೆದ ಬಾಲಕಿಗೆ ಪೇಟ, ಹಾರ ಹಾಕಿದ ಡಿಸಿ ಸಮಯಪ್ರಜ್ಞೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. “ವೈಭವಿಯ ಈ ಸಾಹಸ ಎಲ್ಲರಿಗೂ ಮಾದರಿಯಾಗಿದೆ. ಶಾಲಾ ಹಂತದಲ್ಲಿ ಮಕ್ಕಳಿಗೆ ಇಂತಹ ಸಮಯಪ್ರಜ್ಞೆ ಮತ್ತು ಧೈರ್ಯ ಮೂಡಿ ಬರಬೇಕಿದೆ” ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಉಪನಿರ್ದೇಶಕ ಹೇಮಲತಾ, ಸಹಾಯಕ ನಿರ್ದೇಶಕ ಸುರೇಶ್ ಅಡಿಗ ಹಾಗೂ ವೈಭವಿ ಪಾಲಕರು ಉಪಸ್ಥಿತರಿದ್ದರು. ಮಂಗಳೂರು ನಗರ ಪೊಲೀಸ್ ಘಟಕದ ವತಿಯಿಂದಲೂ ವೈಭವಿಯನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಹಾಗೂ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು.
ಕಿನ್ನಿಗೋಳಿ ಉಲ್ಲಂಜೆಯ ರಾಮನಗರ 2ನೇ ಅಡ್ಡರಸ್ತೆ ಬಳಿ ಸೆ.6ರಂದು ರಸ್ತೆ ದಾಟುತ್ತಿದ್ದ ರಾಜರತ್ನಾಪುರದ ನಿವಾಸಿ ಚೇತನಾ(35) ಅವರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ಅವರ ಮೇಲೆಯೇ ಉರುಳಿ ಬಿದ್ದಿತ್ತು. ಚೇತನಾ ಅವರು ಈಗ ಸುರತ್ಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.