ನಾಪೋಕ್ಲು ಸೆ.20 NEWS DESK : ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 43.55 ಲಕ್ಷ ರೂ. ನಿವ್ವಳ ಲಾಭಗಳಿಸಿ ಎ ಶ್ರೇಣಿ ಯಲ್ಲಿದೆ ಎಂದು ಸಂಘದ ಅಧ್ಯಕ್ಷ ಕೇಟೋಳಿರ ಎಸ್.ಹರೀಶ್ ಪೂವಯ್ಯ ತಿಳಿಸಿದರು. ಸಂಘದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಘದಲ್ಲಿ ಒಟ್ಟು 2534 ಸದಸ್ಯರಿದ್ದಾರೆ. ಪಾಲು ಬಂಡವಾಳ 1.25 ಕೋಟಿ ರೂ. ಒಟ್ಟು ನಿಧಿ 3.30 ಕೋಟಿ ಇದೆ ಎಂದ ಅವರು, ಸದಸ್ಯರು 43.23 ಕೋಟಿ ರೂ.ಳನ್ನು ಠೇವಣಿ ಇರಿಸಿದ್ದು, ಸದಸ್ಯರಿಗೆ 40.18 ಕೋಟಿ ರೂ.ಗಳನ್ನು ಸಾಲ ರೂಪದಲ್ಲಿ ನೀಡಲಾಗಿದೆ. ದುಡಿಯುವ ಬಂಡವಾಳ 55 ಕೋಟಿ ಇದ್ದು, ಸಂಘವು ಪ್ರಸಕ್ತ 2023-24 ಸಾಲಿನಲ್ಲಿ ಒಟ್ಟು 187 ಕೋಟಿ ರೂ.ಗಳ ವಹಿವಾಟು ನಡೆಸುವುದರ ಮೂಲಕ 46.87 ಲಕ್ಷ ನಿವ್ವಳ ಲಾಭ ಗಳಿಸಿ ಎ. ಶ್ರೇಣಿಯಲ್ಲಿದೆ ಎಂದು ಮಾಹಿತಿ ನೀಡಿದರು. ಸದಸ್ಯರಿಗೆ ಈ ವರ್ಷ ಶೇ.14 ರಷ್ಟು ಡಿವಿಡೆಂಟ್ ನೀಡಲಾಗುವುದು. ಹಿರಿಯ ನಾಗರಿಕರಿಗೆ ಶೇ.8 ಹಾಗೂ ಮಾಜಿ ಸೈನಿಕರಿಗೆ ಶೇ.8.10 ಬಡ್ಡಿ ನೀಡಲಾಗುವುದು ಎಂದು ತಿಳಿಸಿದರು. ಕೃಷಿ ಅಲ್ಪವಾದಿ ಮಧ್ಯವಾದಿ ಸಾಲಗಳು ಮತ್ತು ಕೃಷಿ ಉತ್ಪನ್ನತರ ಸಾಲಗಳು ಶೀಘ್ರ ವಿತರಣೆ, ಪರಿವರ್ತಿತ ಜಮೀನಿಗೆ ಮೌಲ್ಯವನ್ನು ಆಧರಿಸಿ ಹದಿನೈದು ಲಕ್ಷದವರೆಗೆ, ಅಡಮಾನ ಸಾಲ ವಿತರಣೆ ರೂ.1.20 ಲಕ್ಷದವರೆಗೆ ಮತ್ತು ವಾಹನ ಹಾಗೂ ಕೃಷಿ ಯಂತ್ರೋಪಕರಣಗಳಿಗೆ ಸಾಲ ನೀಡಲಾಗುತ್ತಿದೆ ಎಂದು ಹರೀಶ್ ಪೂವಯ್ಯ ಮಾಹಿತಿಯನ್ನು ನೀಡಿದರು. ಸದಸ್ಯರ ಅನುಕೂಲಕ್ಕಾಗಿ ಆಧುನಿಕ ಅಕ್ಕಿ ಗಿರಣಿ, ಟ್ರಾಕ್ಟರ್, ರಾಸಾಯನಿಕ ಗೊಬ್ಬರ, ಕೀಟನಾಶಕ, ಕೃಷಿ ಉಪಕರಣಗಳನ್ನು ಮಾರಾಟ ಮಾಡಲಾಗುತ್ತಿದೆ. ಅದರೊಂದಿಗೆ ಇ ಸ್ಟಾಂಪ್ ಸೇರಿದಂತೆ ಇನ್ನಿತರ ಸೌಲಭ್ಯವನ್ನೂ ಒದಗಿಸಲಾಗಿದೆ ಎಂದರು.
ಮಹಾಸಭೆ :: ಸಂಘದ ವಾರ್ಷಿಕ ಮಹಾಸಭೆಯು ಸೆ.22 ರಂದು ಬೆಳಿಗ್ಗೆ 10.30 ಗಂಟೆಗೆ ನಾಪೋಕ್ಲು ಕೊಡವ ಸಮಾಜದಲ್ಲಿ ನಡೆಯಲಿದ್ದು ಸದಸ್ಯರು ತಪ್ಪದೆ ಸಭೆಯಲ್ಲಿ ಪಾಲ್ಗೊಂಡು ಸಂಘದ ಶ್ರೇಯೋಭಿವೃದ್ಧಿಗೆ ಸಲಹೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಕುಂಡ್ಯೋಳಂಡ ಎಂ.ಕವಿತಾ, ಚೀಯಕಪೂವಂಡ ಎನ್.ದೇವಯ್ಯ, ಚೋಕಿರ ಬಿ.ಪೂವಪ್ಪ, ಕೇಲೇಟಿರ ಬಿ.ಮುತ್ತಮ್ಮ, ಶಿವಚಾಳಿಯಂಡ ಎಂ.ಕಾರ್ಯಪ್ಪ, ಅರೆಯಡ ಎಂ.ಪೆಮ್ಮಯ್ಯ, ಹೆಚ್.ಎ.ಬೊಳ್ಳು, ಕುಂಡ್ಯೋಳಂಡ ಸಿ ಪೂವಯ್ಯ, ಚೋಕಿರ ಎಸ್.ಚಿಣ್ಣಪ್ಪ, ಟಿ.ವಿ.ಮಿಟ್ಟು, ಅಪ್ಪಚ್ಚಿರ ರೀನಾ ನಾಣಯ್ಯ, ಎನ್.ಕೆ.ಪುಷ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಚಾಳಿಯಂಡ ಎ.ಪೂಣಚ್ಚ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.