ಮಡಿಕೇರಿ ಸೆ.20 NEWS DESK : ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಸೂದನ ಎಸ್.ಈರಪ್ಪ ಅವರ ಅಧ್ಯಕ್ಷತೆಯಲ್ಲಿ ನಗರದಲ್ಲಿ ನಡೆಯಿತು. ನಗರದ ಕೊಡವ ಸಮಾಜದಲ್ಲಿ ನಡೆದ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಸೂದನ ಈರಪ್ಪ ಅವರು ವರದಿ ಸಾಲಿನಲ್ಲಿ ಸಂಘವು 23,43,150 ರೂ. ವ್ಯಾಪರ ಲಾಭ ಗಳಿಸಿದ್ದು, 12,25,760 ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.25ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ ಎಂದು ತಿಳಿಸಿದರು. ಕಳೆದ 39 ವರ್ಷಗಳಿಂದ ಸ್ಥಗಿತಗೊಂಡಿದ್ದ ಏಲಕ್ಕಿ ಖರೀದಿ ಮತ್ತು ಮುಂಗಡ ನೀಡಿ ಠೇವಣಿ ಇಟ್ಟುಕೊಳ್ಳುವ ವ್ಯವಸ್ಥೆಯನ್ನು ಕಳೆದ 2 ವರ್ಷಗಳಿಂದ ಆರಂಭಿಸಲಾಗಿದ್ದು, ಸಂಘದ ಸದಸ್ಯರು ಹಾಗೂ ಏಲಕ್ಕಿ ಬೆಳೆಗಾರರು ಇದರ ಸದುಪಯೋಗ ಪಡೆದು ತಮ್ಮ ಫಸಲಿಗೆ ಯೋಗ್ಯ ಬೆಲೆಯನ್ನು ಪಡೆಯಬೇಕೆಂದು ಕೋರಿದರು. ಎರಡು ವರ್ಷಗಳ ಹಿಂದೆ ಮಡಿಕೇರಿ ನಗರದಲ್ಲಿ ಆರಂಭವಾದ “ಉತ್ಪತ್ತಿ” ಮಳಿಗೆ (ಸ್ಪೈಸಸ್ ಮಳಿಗೆ) ರೈತರ ಹಾಗೂ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ರೈತರಿಗೆ ನಾವು ಉತ್ತಮ ದರ ನೀಡುತ್ತೇವೆ. ಗ್ರಾಹಕರಿಗೂ ಸಹ ನಾವು ತೃಪ್ತಿಯಾಗುವಂತೆ ಸಾಂಬಾರ ಸಾಮಾಗ್ರಿಗಳನ್ನು ಪೂರೈಸುತ್ತೇವೆ ಎಂದು ಸೂದನ ಈರಪ್ಪ ಹೇಳಿದರು. ರೈತರಿಗೆ ಬೇಕಾದ ಎಲ್ಲಾ ಗುಣಮಟ್ಟದ ಕೃಷಿ ಉಪಕರಣಗಳು ನಮ್ಮ ಕೇಂದ್ರ ಕಛೇರಿಯ ಹತ್ಯಾರು ವಿಭಾಗ ಹಾಗೂ ಸೋಮವಾರಪೇಟೆ ಶಾಖಾ ವಿಭಾಗದಲ್ಲಿ ಲಭ್ಯವಿದ್ದು, ರೈತರು ಅತೀ ಹೆಚ್ಚು ವ್ಯಾಪಾರ ಮಾಡಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಮುಂದಿನ ಮಹಾಸಭೆಯಲ್ಲಿ ಅತೀ ಹೆಚ್ಚು ವ್ಯವಹಾರ ಮಾಡಿದ ಮೂವರು ಸದಸ್ಯರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಸಂಘದ ನಿರ್ದೇಶಕರುಗಳಾದ ಕೋಳುಮುಡಿಯನ ಆರ್.ಅನಂತಕುಮಾರ್, ಮಂದ್ರೀರ ಜಿ.ಮೋಹನ್ ದಾಸ್, ಬಿ.ಈ.ಬೋಪಯ್ಯ, ಶಿವಚಾರರ ಎಸ್.ಸುರೇಶ್, ಬಿ.ಸಿ.ಚೆನ್ನಪ್ಪ, ಕುಂಭುಗೌಡನ ವಿನೋದ ಕುಮಾರ್, ಸಿ.ಪಿ.ವಿಜಯ್ ಕುಮಾರ್, ಪೇರಿಯನ ಕೆ.ಉದಯಕುಮಾರ್, ಪೆಮ್ಮಂಡ ಟಿ.ಬೋಪಣ್ಣ, ಪರಿವಾರ ಎಸ್.ಕವಿತ, ಸದಸ್ಯರು ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ನಿರ್ದೇಶಕಿ ಅಂಬೆಕಲ್ಲು ಸುಶೀಲ ಪ್ರಾರ್ಥಿಸಿ, ಕಾರ್ಯನಿರ್ವಹಣಾಧಿಕಾರಿ ಎಂ.ಎಂ.ತಮ್ಮಯ್ಯ ನಿರೂಪಿಸಿ, ಉಪಾಧ್ಯಕ್ಷ ಕೆ.ಕೆ.ಗೋಪಾಲ ಅವರು ವಂದಿಸಿದರು.