ಮಡಿಕೇರಿ ಸೆ.25 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸೋಮವಾರಪೇಟೆ ಬಿ.ಸಿ.ಟ್ರಸ್ಟ್, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಶಾಂತಳ್ಳಿ ವಲಯದ ಕಿಬ್ಬೆಟ್ಟ ಗ್ರಾಮದಲ್ಲಿ ಸರಸ್ವತಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ್ ಉದ್ಘಾಟಿಸಿ ಮಾತನಾಡಿ, ಯೋಜನೆಯಿಂದ ಸಿಕ್ಕಿರುವಂತಹ ಹಲವು ಅನುದಾನಗಳ ಬಗ್ಗೆ ಹಾಗೂ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಮಹಿಳೆಯರ ಜವಾಬ್ದಾರಿಗಳ ಕುರಿತು ವಿವರಿಸಿದ ಅವರು, ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರು ಸಾಮಾಜಿಕ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರಬುದ್ಧತೆಯನ್ನು ಹೊಂದಬೇಕು ಎಂದರು. ಒಕ್ಕೂಟದ ಮಾಜಿ ಅಧ್ಯಕ್ಷ ಸುಂದರ್ ಮಾತನಾಡಿ, ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರವೇನು, ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಕುರಿತು ಮಾಹಿತಿಯನ್ನು ನೀಡಿದರು. ವಲಯದ ಮೇಲ್ವಿಚಾರಕರಾದ ಲಕ್ಷ್ಮಣ್ ಜ್ಞಾನ ವಿಕಾಸ ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ತಿಳಿಸಿದರು. ಒಕ್ಕೂಟದ ಅಧ್ಯಕ್ಷರಾದ ರೇಷ್ಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಯ್ಯಪ್ಪಸ್ವಾಮಿ ದೇವಾಲಯದ ಅಧ್ಯಕ್ಷ ಜಗನ್ನಾಥ್, ಪಂಚಾಯಿತಿ ಮಾಜಿ ಸದಸ್ಯರಾದ ಜಾನಕಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕವನ, ಸೇವಾ ಪ್ರತಿನಿಧಿ ನಿಖಿತಾ, ಜ್ಞಾನವಿಕಾಸ ತಂಡದ ಸದಸ್ಯರು ಹಾಜರಿದ್ದರು. ಮಹಾಮಳೆಯಿಂದ ಮನೆ ಕಳೆದುಕೊಂಡ ತನುಶ್ರೀ ಅವರಿಗೆ ಮನೆ ನಿರ್ಮಾಣದ ಪತ್ರವನ್ನು ವಿತರಿಸಲಾಯಿತು. ಆಟೋಟ ಸ್ಪರ್ಧೆ ಆಡಿ ಬಹುಮಾನ ವಿತರಣೆ ಮಾಡಲಾಯಿತು.