ಮಡಿಕೇರಿ ಸೆ.25 NEWS DESK : ಮಡಿಕೇರಿ ದಸರಾ ಆಚರಣೆ ಸಂಬಂಧ ದಶ ಮಂಟಪ ಹಾಗೂ ಕರಗ ಉತ್ಸವ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಭೆ ನಡೆಸಿದರು. ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಡಿಕೇರಿ ನಗರದಲ್ಲಿ ಮಂಟಪಗಳು ಸಾಗುವ ಮಾರ್ಗ ಹಾಗೂ ವೇಳಾಪಟ್ಟಿ ಬಗ್ಗೆ ಲಿಖಿತವಾಗಿ ಮಾಹಿತಿ ಒದಗಿಸುವಂತೆ ಸಲಹೆ ಮಾಡಿದರು. ದಸರಾದಂದು ಮಂಟಪಗಳ ಮೆರವಣಿಗೆ ಸಂದರ್ಭದಲ್ಲಿ ಯಾವ ಮಂಟಪ ಯಾವ ವೇಳೆಯಲ್ಲಿ ಎಲ್ಲಿಂದ, ಯಾವ ಮಾರ್ಗ ತೆರಳಲಿದೆ ಎಂಬ ಬಗ್ಗೆ ಮಾಹಿತಿ ನೀಡುವಂತಾಗಬೇಕು. ಜೊತೆಗೆ ನಿಗಧಿತ ವೇಳೆ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇದರಿಂದ ನಿಗದಿತ ವೇಳೆ ಹಾಗೂ ಮಂಟಪಗಳ ಮೆರವಣಿಗೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ಇದ್ದಲ್ಲಿ ಸಾರ್ವಜನಿಕರಿಗೆ ಒಳಿತಾಗಲಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಮಡಿಕೇರಿ ಜನೋತ್ಸವ ದಸರಾವು ಪ್ರಮುಖವಾಗಿ ಕರಗ ಉತ್ಸವ ಹಾಗೂ ಮಂಟಪಗಳ ಮೆರವಣಿಗೆ ಅತೀ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಮಡಿಕೇರಿ ದಸರಾದ ವಿಶೇಷತೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಮಡಿಕೇರಿ ದಸರಾದ ವಿಶೇಷತೆಯನ್ನು ಉಳಿಸಿಕೊಂಡು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಬೇಕಿದೆ. ಆ ನಿಟ್ಟಿನಲ್ಲಿ ದಸರಾ ಯಶಸ್ಸಿಗೆ ಸಹಕರಿಸುವಂತೆ ಅವರು ಕೋರಿದರು. ಧ್ವನಿವರ್ಧಕ ಬಳಕೆ ಸಂಬಂಧ ನಿಯಮಗಳನ್ನು ಪಾಲಿಸಬೇಕು. ಸಾರ್ವಜನಿಕ ಹಿತಾಸಕ್ತಿ ಅತೀ ಮುಖ್ಯ ಎಂಬುದನ್ನು ಯಾರೂ ಸಹ ಮರೆಯಬಾರದು ಎಂದು ತಿಳಿಸಿದರು. ಈಗಾಗಲೇ ಮಡಿಕೇರಿ ದಸರಾ ಧ್ವನಿವರ್ಧಕ(ಡಿಜೆ) ಸಂಬಂಧಿಸಿದಂತೆ ಪಿಐಎಲ್ ದಾಖಲಾಗಿದ್ದು, ಈ ಬಗ್ಗೆ ಪ್ರತಿಯೊಬ್ಬರಲ್ಲೂ ಮಾಹಿತಿ ಇರಬೇಕು. ಜೊತೆಗೆ ದಶಮಂಟಪಗಳ ಪುರಾಣ ಸಂಬಂಧ ಲಿಖಿತವಾಗಿ ಮಾಹಿತಿ ಒದಗಿಸಿದಲ್ಲಿ ಮುಂದಿನ ದಿನಗಳಲ್ಲಿ ಪಠ್ಯ ಪುಸ್ತಕಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು. ಮಡಿಕೇರಿ ದಸರಾ ಸಂಸ್ಕøತಿ, ಸಂಪ್ರದಾಯ, ಆಚರಣೆ ಸಂಬಂಧ ರಾಜ್ಯದ ಹೊರಗಡೆಯು ಸಹ ತಿಳಿಯುವಂತಾಗಬೇಕು. ಆ ನಿಟ್ಟಿನಲ್ಲಿ ಈ ಬಾರಿ ಪ್ರತೀ ಮಂಟಪದ ಬಗ್ಗೆ ಕಿರು ಪರಿಚಯದ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದಶ ಮಂಟಪ ಸಮಿತಿ ಅಧ್ಯಕ್ಷ ಜಗದೀಶ್ ಮಾತನಾಡಿ, ಧ್ವನಿವರ್ಧಕ ಬಳಕೆ ಸಂಬಂಧ ಈಗಾಗಲೇ ಎಲ್ಲಾ ಮಂಟಪಗಳ ಅಧ್ಯಕ್ಷರ ಜೊತೆ ಚರ್ಚಿಸಲಾಗಿದ್ದು, ಎಲ್ಲಾ ಮಂಟಪಗಳು ಸ್ವಯಂ ಪ್ರೇರಣೆಯಿಂದ ಯಾವ ರೀತಿ ಧ್ವನಿವರ್ಧಕ(ಡಿಜೆ) ಬಳಕೆ ಮಾಡಬೇಕು ಎಂಬ ಬಗ್ಗೆ ನಿಯಮಗಳನ್ನು ರೂಪಿಸಿಕೊಳ್ಳಲಾಗಿದೆ ಎಂದರು. ಮಂಟಪ ತೆರಳುವ ಒಂದು ಬದಿಯಲ್ಲಿ ಮಾತ್ರ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಬೇಕು. ಎರಡು ಬದಿ ತೆರೆದರೆ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಲಿದೆ ಎಂದು ಮಂಟಪ ಸಮಿತಿಯ ರಾಜೇಶ್ ತಿಳಿಸಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಮಾತನಾಡಿ, ಸುಗಮ ಸಾರಿಗೆ ಸಂಚಾರ ಹಾಗೂ ಜನರ ಓಡಾಟಕ್ಕೆ ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮಂಟಪಗಳನ್ನು ಜಾಗೃತೆಯಿಂದ ಸುರಕ್ಷಿತ ಸ್ಥಳಕ್ಕೆ ತಲುಪಿಸಬೇಕು. ಆ ನಿಟ್ಟಿನಲ್ಲಿ ಎಲ್ಲಾ ಮಂಟಪಗಳು ಸಾರ್ವಜನಿಕರ ಹಿತಾಸಕ್ತಿಯಂತೆ ಸ್ವಯಂಪ್ರೇರಣೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು. ನಾಡಹಬ್ಬ ಮಡಿಕೇರಿ ದಸರಾವನ್ನು ವ್ಯವಸ್ಥಿತವಾಗಿ ಆಚರಿಸಲು ಎಲ್ಲರ ಸಹಕಾರ ಅತ್ಯಗತ್ಯ. ತಮ್ಮಲ್ಲಿಯೇ ಸ್ವಯಂ ಸೇವಕರನ್ನು ನಿಯೋಜಿಸಿಕೊಂಡು ದಸರಾ ಯಶಸ್ಸಿಗೆ ಶ್ರಮಿಸಬೇಕು ಎಂದು ಸುಂದರ್ ರಾಜ್ ಕೋರಿದರು. ದಶಮಂಟಪ ಸಮಿತಿಯವರ ಮನವಿ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾಹಿತಿಯನ್ನು ಲಿಖಿತವಾಗಿ ಒದಗಿಸುವಂತೆ ಜಿಲ್ಲಾಧಿಕಾರಿ ಇದೇ ಸಂದರ್ಭದಲ್ಲಿ ತಿಳಿಸಿದರು. ದಶಮಂಟಪ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೇಶ್, ರಂಜಿತ್ ಅವರು ಹಲವು ವಿಚಾರಗಳ ಕುರಿತು ಮಾತನಾಡಿದರು.